


ಮಂಗಳೂರು: ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ನಡೆದ ಹೊಡೆದಾಟದ ಹಿನ್ನೆಲೆಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಜೈಲು ಕೊಠಡಿಗಳೊಳಗೆ ನಾಲ್ಕು ಮೊಬೈಲ್ ಫೋನ್ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಕಾರಾಗೃಹ ಅಧೀಕ್ಷಕ ಶರಣಬಸಪ್ಪ ಅವರು ಅನಿರೀಕ್ಷಿತ ತಪಾಸಣೆಗೆ ತೆರಳಿದ ಸಂದರ್ಭ ವಿಚಾರಣಾಧೀನ ಕೈದಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಬಳಿಕ ಅದೇ ದಿನ ಸಂಜೆ ಮತ್ತೊಮ್ಮೆ ತಪಾಸಣೆ ನಡೆಸಿದಾಗ, ಕೈದಿಗಳು ಎರಡು ವಿಭಾಗಗಳ ಕಬ್ಬಿಣದ ಗೇಟ್ಗಳನ್ನು ಅಲ್ಲಾಡಿಸಿ ಮುರಿಯುವ ರೀತಿಯಲ್ಲಿ ಜೋರಾಗಿ ಕೂಗಾಡುತ್ತಾ ಗಲಾಟೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಿತಿಗತಿಯ ಗಂಭೀರತೆಯನ್ನು ಗಮನಿಸಿದ ಮಂಗಳೂರು ನಗರ ಪೊಲೀಸರು, ವಿಶೇಷ ಕಾರ್ಯಪಡೆ ಹಾಗೂ ಸ್ಥಳೀಯ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ತಕ್ಷಣ ಕಾರಾಗೃಹಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ನಂತರ ಪೊಲೀಸರು ನಡೆಸಿದ ಪರಿಶೀಲನೆಯಲ್ಲಿ ಎರಡು ಕೊಠಡಿಗಳಲ್ಲಿ ಗಲಾಟೆಗೆ ಸಂಬಂಧಿಸಿದಂತೆ ಸಿ.ಸಿ.ಟಿ.ವಿ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ, ‘ಎ’ ವಿಭಾಗದ ಮೊಯಿದ್ದಿನ್ ಫರಾದ್, ಸರ್ಫರಾಜ್, ಮೊಹಮ್ಮದ್ ಅಲ್ತಾಫ್, ಇಮ್ತಿಯಾಜ್, ಅಬ್ದುಲ್ ನೌಜೀದ್, ಮೊಹಮ್ಮದ್ ಸಾಯಿಲ್ ಅಕ್ರಂ ಮತ್ತು ಮಹಮ್ಮದ್ ಹನೀಫ್, ಹಾಗೂ ‘ಬಿ’ ವಿಭಾಗದ ಲತೇಶ್ ಜೋಗಿ, ಮಂಜುನಾಥ, ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ, ಗುರುರಾಜ ಮತ್ತು ಸುಮಂತ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿರುವುದು ದೃಢಪಟ್ಟಿದೆ.
ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







