

ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಪೀಠೋಪಕರಣಗಳನ್ನು ಧ್ವಂಸಗೊಂಡಿವೆ. ಅಷ್ಟೇ ಅಲ್ಲದೆ ವಿದ್ಯುತ್ ತಗುಲಿ ನಾಲ್ವರು ಸಾವನ್ನಪ್ಪಿದ್ದು, 97 ಮಂದಿ ಗಾಯಗೊಂಡಿದ್ದಾರೆ.
ಫುಕುಶಿಮಾ ಪ್ರದೇಶದ ಕರಾವಳಿಯಾಚೆ 60 ಕಿಲೋ ಮೀಟರ್ ಆಳದಲ್ಲಿ ಭೂಕಂಪನದ ಕೇಂದ್ರಬಿಂದು ಪತ್ತೆಯಾಗಿರುವುದಾಗಿ ಭೂಗರ್ಭಶಾಸ್ತ್ರ ಇಲಾಖೆ ತಿಳಿಸಿದೆ. ಪ್ರಬಲ ಭೂಕಂಪದ ಪರಿಣಾಮ 20 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇನ್ನು ಸಣ್ಣ ಪ್ರಮಾಣದಲ್ಲಿ ಸುನಾಮಿ ಅಪ್ಪಳಿಸಿದ್ದು, ಸುನಾಮಿಯಿಂದ ಹೆಚ್ಚು ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಇಂದು ಬೆಳಿಗ್ಗೆ ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ, ಭೂಕಂಪದ ಸಮಯದಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು ಅವರ ಸಾವಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಮತ್ತು 97 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಇದೇ ಪ್ರದೇಶವು 11 ವರ್ಷಗಳ ಹಿಂದೆ 9.0 ತೀವ್ರತೆಯ ಭೂಕಂಪ ಮತ್ತು ಬೃಹತ್ ಸುನಾಮಿಯಿಂದ ಧ್ವಂಸಗೊಂಡಿತ್ತು. ಸುನಾಮಿಯಿಂದಾಗಿ ನ್ಯೂಕ್ಲಿಯರ್ ರಿಯಾಕ್ಟರ್ ಹಾನಿಗೊಂಡು ಭಾರೀ ಪ್ರಮಾಣದಲ್ಲಿ ವಿಕಿರಣಗಳು ಹೊರಸೂಸಿತ್ತು ಎಂದು ವರದಿ ತಿಳಿಸಿದೆ.










