
ನವದೆಹಲಿ/ನ್ಯೂಯಾರ್ಕ್: ಅಮೆರಿಕದ ಶ್ರೀಮಂತ ಉದ್ಯಮಿ ಹಾಗೂ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ (Jeffrey Epstein) ಗೆ ಸಂಬಂಧಿಸಿದ ನ್ಯಾಯಾಲಯದ ದಾಖಲೆಗಳು, ಸಾಕ್ಷ್ಯ ಹೇಳಿಕೆಗಳು ಮತ್ತು ತನಿಖಾ ವರದಿಗಳನ್ನು ಒಟ್ಟಾಗಿ “Epstein Files” ಎಂದು ಕರೆಯಲಾಗುತ್ತಿದ್ದು, ಇವು ಜಗತ್ತಿನಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿವೆ. ಈ ಫೈಲ್‌ಗಳು ಎಪ್ಸ್ಟೀನ್ ನಡೆಸುತ್ತಿದ್ದ ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣಾ ಜಾಲವನ್ನು ಬಹಿರಂಗಪಡಿಸಿದ್ದು, ರಾಜಕೀಯ ನಾಯಕರು, ಉದ್ಯಮಿಗಳು, ಸೆಲೆಬ್ರಿಟಿಗಳು ಸೇರಿದಂತೆ ಅನೇಕ ಪ್ರಭಾವಿ ವ್ಯಕ್ತಿಗಳ ಹೆಸರುಗಳು ಇದರೊಳಗೆ ಕಾಣಿಸಿಕೊಂಡಿವೆ.


ಪ್ರಕರಣದ ಹಿನ್ನೆಲೆ:
2000ರ ದಶಕದ ಆರಂಭದಲ್ಲಿಯೇ ಫ್ಲೋರಿಡಾ ರಾಜ್ಯದಲ್ಲಿ ಎಪ್ಸ್ಟೀನ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳು ದಾಖಲಾಗಿದ್ದರೂ, ಪ್ರಭಾವಿ ಸಂಪರ್ಕಗಳ ಮೂಲಕ ಆತ ಹಲವು ವರ್ಷಗಳು ಪ್ರಕರಣಗಳಿಂದ ತಪ್ಪಿಸಿಕೊಳ್ಳುತ್ತಿದ್ದ ಎನ್ನಲಾಗಿದೆ. 2019ರಲ್ಲಿ ಮತ್ತೆ ಗಂಭೀರ ಆರೋಪಗಳಡಿ ನ್ಯೂಯಾರ್ಕ್‌ನಲ್ಲಿ ಬಂಧನಕ್ಕೊಳಗಾದ ಎಪ್ಸ್ಟೀನ್ ಮೇಲೆ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ದಂಧೆಗೆ ಬಳಸಿದ ಆರೋಪ ಅಧಿಕೃತವಾಗಿ ದಾಖಲಾಗಿತ್ತು.
ಜೈಲಿನಲ್ಲೇ ಸಾವು – ಅನುಮಾನಗಳ ನೆರಳು:
ಬಂಧನದ ಕೆಲವೇ ದಿನಗಳಲ್ಲಿ ಎಪ್ಸ್ಟೀನ್ ಜೈಲಿನಲ್ಲೇ ಮೃತಪಟ್ಟಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಮೆರಿಕ ಸರ್ಕಾರ ಘೋಷಿಸಿತು. ಆದರೆ ಜೈಲಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸದಿರುವುದು, ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಎಪ್ಸ್ಟೀನ್ ಜೊತೆ ಸಂಪರ್ಕ ಹೊಂದಿದ್ದ ಶಕ್ತಿಶಾಲಿಗಳ ಪಟ್ಟಿ ಕಾರಣದಿಂದಾಗಿ “ಇದು ಆತ್ಮಹತ್ಯೆ ಅಲ್ಲ, ಸತ್ಯ ಮುಚ್ಚಿಹಾಕಲು ಮಾಡಲಾದ ಸಾವು” ಎಂಬ ಅನುಮಾನಗಳು ಇನ್ನೂ ಮುಂದುವರಿದಿವೆ.

Epstein Files ನಲ್ಲಿ ಬಹಿರಂಗವಾದ ಪ್ರಮುಖ ಅಂಶಗಳು:
ಲೈಂಗಿಕ ಶೋಷಣೆಗೆ ಒಳಗಾದ ಮಹಿಳೆಯರ ಪ್ರಮಾಣಿತ ಹೇಳಿಕೆಗಳು, ಎಪ್ಸ್ಟೀನ್‌ನ ಖಾಸಗಿ ವಿಮಾನ “ಲೋಲಿಟಾ ಎಕ್ಸ್‌ಪ್ರೆಸ್” ಪ್ರಯಾಣ ಪಟ್ಟಿಗಳು, ಕ್ಯಾರಿಬಿಯನ್ ಸಮುದ್ರದಲ್ಲಿರುವ ಖಾಸಗಿ ದ್ವೀಪದ ಸಭೆಗಳ ವಿವರಗಳು, ಪ್ರಭಾವಿ ವ್ಯಕ್ತಿಗಳೊಂದಿಗೆ ನಡೆದ ಇಮೇಲ್ ಮತ್ತು ಸಂದೇಶಗಳು, ಲೈಂಗಿಕ ದಂಧೆಗೆ ಬಳಸಲಾಗಿದ್ದ ಹಣಕಾಸು ಜಾಲದ ಮಾಹಿತಿ, ಅನಿಲ್ ಅಂಬಾನಿ ಜೊತೆಗಿನ ಸಂಭಾಷಣೆ ಬಹಿರಂಗ.
ಇತ್ತೀಚೆಗೆ ಅಮೆರಿಕದ ನ್ಯಾಯ ಇಲಾಖೆ ಬಿಡುಗಡೆಗೊಳಿಸಿರುವ ಹೊಸ ದಾಖಲೆಗಳಲ್ಲಿ, ಎಪ್ಸ್ಟೀನ್ ಹಲವು ವರ್ಷಗಳ ಕಾಲ ಭಾರತೀಯ ಉದ್ಯಮಿ ಅನಿಲ್ ಅಂಬಾನಿ ಜೊತೆ ಸಂಪರ್ಕದಲ್ಲಿದ್ದ ಎನ್ನುವುದು ಬಹಿರಂಗವಾಗಿದೆ. ದಾಖಲೆಗಳ ಪ್ರಕಾರ 2017ರಿಂದ 2019ರವರೆಗೆ ಇವರಿಬ್ಬರೂ ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದರು.
ಸಂಭಾಷಣೆಗಳಲ್ಲಿ ಜಾಗತಿಕ ವ್ಯವಹಾರಗಳು, ಉದ್ಯಮ ಆಸಕ್ತಿಗಳು, ವೈಯಕ್ತಿಕ ವಿಷಯಗಳು ಹಾಗೂ ಮಹಿಳೆಯರ ಕುರಿತ ಚರ್ಚೆಗಳೂ ಸೇರಿವೆ. 2017ರಲ್ಲಿ ಎಪ್ಸ್ಟೀನ್ ಅಂಬಾನಿ ಕುಟುಂಬದ ಬಗ್ಗೆ ಮಾಹಿತಿಯಿರುವ ಹಲವಾರು ಪುಸ್ತಕಗಳನ್ನು ತರಿಸಿಕೊಂಡಿದ್ದನ್ನೂ ದಾಖಲೆಗಳು ತೋರಿಸುತ್ತವೆ. ಪ್ಯಾರಿಸ್ ಹಾಗೂ ನ್ಯೂಯಾರ್ಕ್‌ನಲ್ಲಿ ಖಾಸಗಿಯಾಗಿ ಭೇಟಿಯಾಗುವ ಬಗ್ಗೆ ಇವರಿಬ್ಬರೂ ಚರ್ಚಿಸಿದ್ದನ್ನೂ ಸಂದೇಶಗಳು ಸೂಚಿಸುತ್ತವೆ.
ಮೇ 2019ರಲ್ಲಿ ಅನಿಲ್ ಅಂಬಾನಿ ನ್ಯೂಯಾರ್ಕ್‌ಗೆ ಬಂದ ಸಂದರ್ಭದಲ್ಲಿ, ಮ್ಯಾನಹಟನ್‌ನ ಎಪ್ಸ್ಟೀನ್ ನಿವಾಸದಲ್ಲಿ ಇವರಿಬ್ಬರೂ ಭೇಟಿಯಾಗಿದ್ದರು ಎಂದು ಸಹಾಯಕರು ದೃಢಪಡಿಸಿದ್ದಾರೆ. ಆ ಬಳಿಕ ಎಪ್ಸ್ಟೀನ್ “ಇಂದು ಸಮಯ ತುಂಬ ಚೆನ್ನಾಗಿ ಕಳೆಯಿತು, ನಿಮ್ಮನ್ನು ಭೇಟಿಯಾಗಿದ್ದು ಸಂತೋಷ” ಎಂದು ಸಂದೇಶ ಕಳುಹಿಸಿದ್ದಾನೆ.
ಜಾಗತಿಕ ಪ್ರತಿಧ್ವನಿ:
ಈ ದಾಖಲೆಗಳು ಬಹಿರಂಗವಾದ ಬಳಿಕ ಅಮೆರಿಕ ಮಾತ್ರವಲ್ಲದೆ ಯೂರೋಪ್, ಏಷ್ಯಾ ಹಾಗೂ ಮಧ್ಯಪೂರ್ವ ರಾಷ್ಟ್ರಗಳಲ್ಲೂ ಭಾರೀ ಚರ್ಚೆ ಆರಂಭವಾಗಿದೆ. “ಅಧಿಕಾರ, ಹಣ ಮತ್ತು ಅಪರಾಧಗಳು ಒಂದೇ ವೇದಿಕೆಯಲ್ಲಿ ಸೇರುವುದಕ್ಕೆ ಎಪ್ಸ್ಟೀನ್ ಪ್ರಕರಣ ಜೀವಂತ ಉದಾಹರಣೆ” ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾಯಕ್ಕಾಗಿ ಹೋರಾಟ:
ಎಪ್ಸ್ಟೀನ್ ಸತ್ತರೂ ಅವನ ಸಹಚರರು ಹಾಗೂ ದಂಧೆಯಲ್ಲಿ ಭಾಗಿಯಾಗಿದ್ದವರ ವಿರುದ್ಧ ತನಿಖೆ ಮುಂದುವರಿಯಬೇಕು ಎಂಬ ಒತ್ತಾಯ ಜಗತ್ತಿನಾದ್ಯಂತ ಕೇಳಿಬರುತ್ತಿದೆ. ಶೋಷಣೆಗೆ ಒಳಗಾದವರು ಇನ್ನೂ ನ್ಯಾಯಕ್ಕಾಗಿ ಹೋರಾಡುತ್ತಿದ್ದು, “Epstein Files ಸಂಪೂರ್ಣವಾಗಿ ಬಹಿರಂಗವಾದರೆ, ಇನ್ನೂ ಹಲವರ ಮುಖವಾಡ ಕಳಚುವುದು ಖಚಿತ” ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.








