



ಕೌಟುಂಬಿಕ ಕಲಹದಿಂದ ಬೇಸತ್ತು ವ್ಯಕ್ತಿಯೊಬ್ಬ ಪತ್ನಿಯ ಮೇಲೆ ಕಬ್ಬಿಣದ ರಾಡ್‍ನಿಂದ ಹಲ್ಲೆಗೈದು ಹತ್ಯೆ ಮಾಡಿದ ಘಟನೆ ಮಳವಳ್ಳಿಯ ದೇಶಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೊಲೆಗೈದ ಆರೋಪಿ ಮಹದೇವ್ (38) ಹಾಗೂ ಹತ್ಯೆಗೀಡಾದ ಮಹಿಳೆ ಮಧುಶ್ರೀ (32) ಎಂದು ಗುರುತಿಸಲಾಗಿದೆ.
10 ವರ್ಷಗಳ ಹಿಂದೆ ಮಧುಶ್ರೀ ಹಾಗೂ ಮಹದೇವ್ ಮದುವೆಯಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿತ್ತು. ಮಂಗಳವಾರ ರಾತ್ರಿ ಸಹ ಇಬ್ಬರು ಜಗಳವಾಡಿಕೊಂಡಿದ್ದು, ಈ ವೇಳೆ ಕಟ್ಟಿಗೆ ಹಾಗೂ ಕಬ್ಬಿಣದ ರಾಡ್‍ನಿಂದ ಮಹಾದೇವ್ ಮಹಿಳೆಯ ತಲೆಯ ಮೇಲೆ ಹಲ್ಲೆಗೈದಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಆರೋಪಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಂಪತಿಗೆ 6 ಹಾಗೂ 8 ವರ್ಷದ ಇಬ್ಬರೂ ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಕೊಲೆಯ ಬಳಿಕ ಮಹದೇವ್ ಕಿರುಗಾವಲು ಪೊಲೀಸ್ ಠಾಣೆಗೆ ತೆರಳಿ ಪತ್ನಿಯನ್ನು ಕೊಲೆಗೈದಿದ್ದಾಗಿ ತಿಳಿಸಿ ಶರಣಾಗಿದ್ದಾನೆ. ಈ ಸಂಬಂಧ ಕಿರುಗಾವಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ವಿಚಾರಣೆ ನಡೆಸುತ್ತಿದ್ದಾರೆ.