


ಹೈದರಾಬಾದ್: ಸೋದರ ಸಂಬಂಧಿಯನ್ನು ಪ್ರೀತಿಸುತ್ತಿರುವ ವಿಚಾರ ತಿಳಿದು ಮಗಳನ್ನು ತಂದೆಯೇ ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ ಘಟನೆ ತೆಲಂಗಾಣದ ಆದಿಲಾಬಾದ್ ಜಿಲ್ಲೆಯ ಉಮ್ರಿ ಗ್ರಾಮದಲ್ಲಿ ನಡೆದಿದೆ.
ಕಲ್ಯಾಣಿ(18) ತಂದೆಯಿಂದಲೇ ಕೊಲೆಯಾದ ದುರ್ದೈವಿ. ಈಕೆ ತನ್ನ ಚಿಕ್ಕಪ್ಪನ ಮಗನನ್ನೇ ಪ್ರೀತಿಸುತ್ತಿದ್ದಳು ಎಂದು ತಿಳಿದುಬಂದಿದೆ. ಯುವತಿಯ ಪೋಷಕರು ಬೇರೊಬ್ಬನ ಜೊತೆ ನ.25 ರಂದು ನಿಶ್ಚಿತಾರ್ಥ ನಿಗದಿಪಡಿಸಿದ್ದರು. ಇದಾದ ಬಳಿಕ ಯುವತಿ ಮಂಕಾಗಿದ್ದಳು.
ಮಗಳು ಮಂಕಾಗಿದ್ದ ಬಗ್ಗೆ ನ.23 ರಂದು ತಂದೆ ಕೈಲಾಶ್ ವಿಚಾರಿಸಿದ್ದ. ಈ ವೇಳೆ, ಕಲ್ಯಾಣಿ ತನ್ನ ಸೋದರಸಂಬಂಧಿ ಜೊತೆಗಿನ ಪ್ರೇಮದ ಬಗ್ಗೆ ಹೇಳಿಕೊಂಡಿದ್ದಳು. ಇದರಿಂದ ಕೋಪಗೊಂಡ ತಂದೆ ನ.24 ರಂದು ಅವಳು ಮಲಗಿದ್ದಾಗ ಕೊಂದಿದ್ದಾನೆ. ನಂತರ ಆಕೆಯ ಮೃತದೇಹವನ್ನು ಮತ್ತೊಂದು ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿದ್ದನು.
ಕಲ್ಯಾಣಿಯ ತಾಯಿ ಸುಮಿತ್ರಾ, ಮಗಳು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿರುವುದನ್ನು ಕಂಡು ಜೋರಾಗಿ ರೋಧಿಸಿದ್ದರು. ಈ ವಿಚಾರ ತಿಳಿದು ಮನೆಯ ಅಕ್ಕಪಕ್ಕದವರು ಸೇರಿದ್ದರು. ಇದಾದ ಮೂರೇ ಗಂಟೆಯಲ್ಲಿ ಯುವತಿಯ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು.
ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕಲ್ಯಾಣಿ ತಂದೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಈ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.








