Monday, July 20, 2026
spot_imgspot_img
spot_imgspot_img

ಫಿಫಾ ವಿಶ್ವಕಪ್ ಫೈನಲ್‌ ಹಿನ್ನೆಲೆ- ಸೋಮವಾರ ಕೇರಳಂನ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ

- Advertisement -
- Advertisement -

ತಿರುವನಂತಪುರಂ: ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯವನ್ನು ವಿದ್ಯಾರ್ಥಿಗಳು ನಿರಾತಂಕವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಕೇರಳಂ ಸರ್ಕಾರ ಸೋಮವಾರ (ಜುಲೈ 20) ರಾಜ್ಯದ ಎಲ್ಲಾ ಶಾಲೆಗಳು ಹಾಗೂ ವೃತ್ತಿಪರ ಕಾಲೇಜುಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.

ಅರ್ಜೆಂಟೀನಾ ಹಾಗೂ ಸ್ಪೇನ್ ನಡುವಿನ ವಿಶ್ವಕಪ್ ಫೈನಲ್ ಪಂದ್ಯ ಮಧ್ಯರಾತ್ರಿ ಬಳಿಕ ನಡೆಯಲಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ನಿದ್ರೆ ಹಾಗೂ ಮರುದಿನದ ತರಗತಿಗಳ ಮೇಲೆ ಪರಿಣಾಮ ಬೀರದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಸರ್ಕಾರದ ಪ್ರಕಾರ, ರಜೆ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗಲಿದೆ. ಆದರೆ ಈಗಾಗಲೇ ನಿಗದಿಯಾಗಿರುವ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಿಶ್ವಕಪ್ ಫೈನಲ್ ಪಂದ್ಯ ಮಧ್ಯರಾತ್ರಿ ಆರಂಭವಾಗಿ ಮುಂಜಾನೆವರೆಗೂ ನಡೆಯುವ ಸಾಧ್ಯತೆ ಇರುವುದರಿಂದ, ಮಕ್ಕಳಿಗೆ ಸೋಮವಾರ ರಜೆ ನೀಡುವಂತೆ ಪೋಷಕರು ಹಾಗೂ ವಿವಿಧ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆರಂಭದಲ್ಲಿ ಆಲಪ್ಪುಳದ ರಾಜಗಿರಿ ಸೇಂಟ್ ಚಾವರ ಸಿಎಂಐ ಪಬ್ಲಿಕ್ ಸ್ಕೂಲ್ ಹಾಗೂ ಮರಡು ಗ್ರೆಗೋರಿಯನ್ ಪಬ್ಲಿಕ್ ಸ್ಕೂಲ್ ಮಾತ್ರ ರಜೆ ಘೋಷಿಸಿದ್ದವು. ಬಳಿಕ ರಾಜ್ಯದಾದ್ಯಂತ ಇದೇ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸುವ ನಿರ್ಧಾರ ಕೈಗೊಂಡಿದೆ.

ಫಿಫಾ ವಿಶ್ವಕಪ್ 2026ರ ಫೈನಲ್ ಪಂದ್ಯ ಭಾನುವಾರ ಮಧ್ಯರಾತ್ರಿ ಬಳಿಕ 12.30ಕ್ಕೆ ಆರಂಭವಾಗಲಿದ್ದು, ನಿಗದಿತ ಸಮಯದಲ್ಲೇ ಫಲಿತಾಂಶ ಬಂದರೆ ಪಂದ್ಯ ರಾತ್ರಿ 2.30ರ ವೇಳೆಗೆ ಮುಕ್ತಾಯವಾಗುವ ಸಾಧ್ಯತೆ ಇದೆ. ಆದರೆ ಹೆಚ್ಚುವರಿ ಸಮಯ ಅಥವಾ ಪೆನಾಲ್ಟಿ ಶೂಟೌಟ್ ನಡೆದರೆ ಪಂದ್ಯ ಮುಂಜಾನೆವರೆಗೂ ಮುಂದುವರಿಯುವ ಸಾಧ್ಯತೆ ಇದೆ.

ವಿಶ್ವಕಪ್ ಫೈನಲ್ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೇರಳ ಪೊಲೀಸರು ಹಲವು ನಿರ್ಬಂಧಗಳನ್ನು ವಿಧಿಸಿದ್ದಾರೆ. ಅಪಾಯಕಾರಿ ಬೈಕ್ ರೇಸಿಂಗ್, ವಾಹನಗಳಲ್ಲಿ ಸಾಹಸ ಪ್ರದರ್ಶನ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತಿವೇಗದ ಚಾಲನೆ, ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಪಟಾಕಿ ಸಿಡಿಸುವುದು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!