ಸೇಡಂ: ಅಗ್ನಿ ಅವಘಡದಲ್ಲಿ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಿರುವ ಘಟನೆ ತಾಲ್ಲೂಕಿನ ರಂಜೋಳ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.

ಬೆಳಿಗ್ಗೆ ಸುಮಾರು 10 ಗಂಟೆ ಸುಮಾರಿಗೆ ಗ್ರಾಮದ ಬಸವರಾಜ ಎಂಬವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತೀವ್ರವಾಗಿ ವ್ಯಾಪಿಸಿ ಮನೆಯಲ್ಲಿದ್ದ ಬೈಕ್, ಫ್ರಿಡ್ಜ್, ಬಟ್ಟೆಗಳು, ದಿನಸಿ ಸಾಮಗ್ರಿಗಳು ಸೇರಿದಂತೆ ಸುಮಾರು 6 ತೋಳ ಬಂಗಾರ (ಸುಮಾರು 48 ಗ್ರಾಂ ಚಿನ್ನ) ಮತ್ತು 4 ಲಕ್ಷ ರೂ. ನಗದು ಸುಟ್ಟು ಕರಕಲಾಗಿದೆ ಎಂದು ಮೂಲಗಳು ತಿಳಿಸಿವೆ.ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸ ಪಟ್ಟು ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಈ ಸಮಯದಲ್ಲಿ ಬಸವರಾಜ ಅವರ ಕುಟುಂಬಸ್ಥರು ಉದ್ಯೋಗದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರೆ, ಅವರ ತಾಯಿ ಮಾತ್ರ ಮನೆಯಲ್ಲಿ ವಾಸವಾಗಿದ್ದರು. ಅವಘಡ ಸಂಭವಿಸಿದ ವೇಳೆ ಅವರು ಮನೆಯ ಹೊರಗೆ ಹೋಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.ಅಗ್ನಿಶಾಮಕ ದಳದ ಸಹಾಯಕ ಅಧಿಕಾರಿ ಬಸಪ್ಪ, ಮಧು ನಾಯಕ, ಮಹೇಬೂಬ್, ದಿನೇಶ್ ರೆಡ್ಡಿ, ಭಾರತ್, ಲಿಂಗರಾಜ್ ಮತ್ತು ತರುಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.







