



ಆಂಧ್ರಪ್ರದೇಶ: ಮನೆಯೊಳಗೆ ನಿಲ್ಲಿಸಿದ್ದ ಬೈಕ್ ಇಂಜಿನ್‌ನಿಂದ ಹೊರಬಂದ ವಿಷಕಾರಿ ಕಾರ್ಬನ್ ಮಾನಾಕ್ಸೆಡ್ ಅನಿಲವನ್ನು ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಪುಂಗನೂರಿನಲ್ಲಿ ಭಾನುವಾರ(ಮಾ.15) ನಡೆದಿದೆ.
ಮುರಳಿ ಎಂಬಾತ ತನ್ನ ಬೈಕ್ ರಿಪೇರಿ ಮಾಡಿಸಿದ್ದ, ಇಂಜಿನ್ ಸರಿಯಾಗಲು ರಾತ್ರಿಯಿಡೀ ಬೈಕ್ ಚಾಲನೆಯಲ್ಲಿಡುವಂತೆ ಮೆಕ್ಯಾನಿಕ್ ಸಲಹೆ ನೀಡಿದ್ದರಿಂದ ಮುರಳಿ ಮನೆಯೊಳಗೆ ಬೈಕ್ ಸ್ಮಾರ್ಟ್ ಮಾಡಿ ಕಿಟಕಿ-ಬಾಗಿಲುಗಳನ್ನು ಮುಚ್ಚಿ ಮೇಲ್ಛಾವಣಿಯ ಮೇಲೆ ಮಲಗಲು ಹೋಗಿದ್ದರು.
ಬೈಕ್ ನಿಲ್ಲಿಸಿದ್ದ ಕೋಣೆಯಲ್ಲೇ ಮಲಗಿದ್ದ ಅಜ್ಜ ರಾಮಚಂದ್ರಯ್ಯ(70), ಮೊಮ್ಮಗ ಕಾರ್ತಿಕ್(15) ಮತ್ತು ಎಂಟು ವರ್ಷದ ಅವಳಿ ಹೆಣ್ಣು ಮಕ್ಕಳಾದ ಚಂದನಾ ಹಾಗೂ ಚರಿತಾ ನಿದ್ರೆಯಲ್ಲೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬೈಕ್ ಮಾಲೀಕ ಮುರಳಿ ಮತ್ತು ಅವರ ಪತ್ನಿ ರೇವತಿ ಮನೆಯ ಮೇಲಿನ ಕೋಣೆಯಲ್ಲಿ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮುಚ್ಚಿದ ಕೋಣೆಯಲ್ಲಿ ಆಮ್ಲಜನಕದ ಕೊರತೆಯಾಗಿ, ಬೈಕ್ ಹೊಗೆಯಿಂದ ಬಿಡುಗಡೆಯಾದ ಕಾರ್ಬನ್ ಮಾನಾಕ್ಸೆಡ್ ಇಡೀ ಮನೆಯನ್ನು ಆವರಿಸಿದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ದೃಢಪಡಿಸಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.








