ಪರಮಪಾವನ ತಾಣವೂ, ದೇಯಿ ಬೈದ್ಯೆತಿ ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರವೂ ಆಗಿರುವ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಜುಲೈ 31ರವರೆಗೆ ಭಕ್ತರ ಪ್ರವೇಶ, ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದು ಜುಲೈ 4ರಿಂದಲೇ ಜಾರಿಗೆ ಬರಲಿದೆ.ನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಪ್ರಮಾಣ ಹೆಚ್ಚುತ್ತಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.ಕ್ಷೇತ್ರದಲ್ಲಿ ಎಂದಿನಂತೆ ನಿತ್ಯ ಪೂಜೆಯು ಯಥಾಪ್ರಕಾರ ನಡೆಯಲಿದೆ. ಅಗತ್ಯ ಸಂಖ್ಯೆಯ ಪೂಜಾಕರ್ಮಿಗಳು ಮಾತ್ರ ಇದರಲ್ಲಿ ಭಾಗವಹಿಸಲಿದ್ದಾರೆ. ಉಳಿದಂತೆ ಸಾರ್ವಜನಿಕ ಭಕ್ತರಿಗೆ ಪ್ರವೇಶ ಇರುವುದಿಲ್ಲ.ಎಂದು ಆಡಳಿತ ಮಂಡಳಿ ತಿಳಿಸಿದೆ.


ಲಾಕ್‌ಡೌನ್ ಆರಂಭಗೊಂಡ ಬಳಿಕ ಕ್ಷೇತ್ರವನ್ನು ಸಾರ್ವಜನಿಕ ಪ್ರವೇಶಕ್ಕೆ ಮುಚ್ಚಿ ನಿತ್ಯ ಪೂಜೆ ಮಾತ್ರ ನಡೆಸಲಾಗುತ್ತಿತ್ತು.ಜೂನ್ 8ರಿಂದ ರಾಜ್ಯದಲ್ಲಿ ದೇಗುಲಗಳನ್ನು ತೆರೆದಿದ್ದರೂ, ಗೆಜ್ಜೆಗಿರಿಯಲ್ಲಿ ಜೂನ್ 14ರಿಂದ ತೆರೆಯಲಾಗಿತ್ತು. ಇದಾದ ಬಳಿಕ ಭಕ್ತರ ಸುರಕ್ಷತೆಗಾಗಿ ಕ್ಷೇತ್ರದಲ್ಲಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾ ಬರಲಾಗಿದೆ. ಸ್ಯಾನಿಟೈಸಿಂಗ್, ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಪಾಲನೆ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ.


ಈ ನಡುವೆ, ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ವಿಪರೀತ ಪ್ರಮಾಣದಲ್ಲಿ ಏರುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕಕಾರಿ ಪ್ರಮಾಣದ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಕಾರಣ ಸಾರ್ವಜನಿಕ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.ನಾಡಿನ ಸುರಕ್ಷತೆ, ಸಾರ್ವಜನಿಕರ ಆರೋಗ್ಯ ನಮ್ಮೆಲ್ಲರ ಹೊಣೆ.ಈಗ ನಾವು ಸಾಗುತ್ತಿರುವ ದಿನಗಳು ಅತ್ಯಂತ ಸಂಕಷ್ಟದಾಯಕವಾಗಿವೆ. ಪ್ರತಿಯೊಬ್ಬರೂ ಕಟ್ಟೆಚ್ಚರ ವಹಿಸುವ ಅನಿವಾರ್ಯತೆ ಇದೆ.


ಮಹಾಮಾತೆ ದೇಯಿ ಬೈದ್ಯೆತಿ ಮತ್ತು ಅವಳಿ ವೀರರಾದ ಕೋಟಿ ಚೆನ್ನಯರ ಅನುಗ್ರಹ ನಮ್ಮೆಲ್ಲರ ಮೇಲಿರಲಿ.ನಮ್ಮ ಪ್ರಯತ್ನ, ನಮ್ಮ ಪ್ರಾರ್ಥನೆಗೆ ಆ ಶಕ್ತಿಗಳು ಇಂಬು ನೀಡಲಿ ಎಂದು ಹಾರೈಸುತ್ತಾ, ಜುಲೈ 31ರವರೆಗೆ ಭಕ್ತಾದಿಗಳು ಕ್ಷೇತ್ರಕ್ಕೆ ಭೇಟಿ ನೀಡದೇ ಇರುವ ಮೂಲಕ ಸಹಕರಿಸಬೇಕು ಎಂದು ಶ್ರೀಧರ ಪೂಜಾರಿ, ಕ್ಷೇತ್ರದ ಯಜಮಾನರು , ಜಯಂತ ನಡುಬೈಲ್, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರು ಹಾಗೂ ಪೀತಾಂಬರ ಹೇರಾಜೆ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
