

ನವದೆಹಲಿ: ವಾಹನಗಳ ತಡೆರಹಿತ ಚಾಲನೆಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಜಿಪಿಎಸ್ ತಂತ್ರಜ್ಞಾನ ಆಧಾರಿತ ಟೋಲ್ ಶುಲ್ಕ ಸಂಗ್ರಹ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ.
ಮುಂದಿನ ಎರಡು ವರ್ಷಗಳಲ್ಲಿ ಭಾರತ ಟೋಲ್ ಮುಕ್ತವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ದೇಶಾದ್ಯಂತ ಹೆದ್ದಾರಿಗಳಲ್ಲಿ ಟೋಲ್ ಫ್ರೀ ವ್ಯವಸ್ಥೆ ಮಾಡಲಿದ್ದು, ಟೋಲ್ ಶುಲ್ಕವನ್ನು ಬ್ಯಾಂಕ್ ಖಾತೆಯಿಂದ ನೇರವಾಗಿ ಕಡಿತಗೊಳಿಸಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.
ವಾಹನಗಳ ಚಲನೆಯನ್ನು ಆಧರಿಸಿ ಟೋಲ್ ಮೊತ್ತವನ್ನು ನೇರವಾಗಿ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಕಡಿತಗೊಳಿಸಲಾಗುವುದು. ಈಗ ಎಲ್ಲ ವಾಣಿಜ್ಯ ವಾಹನಗಳು ವಾಹನ ಟ್ರ್ಯಾಕಿಂಗ್ ವ್ಯವಸ್ಥೆಗಳೊಂದಿಗೆ ಬರುತ್ತಿವೆ. ಹಳೆ ವಾಹನಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಸಲು ಕೇಂದ್ರ ಸರ್ಕಾರದಿಂದ ಯೋಜನೆ ರೂಪಿಸಲಾಗುವುದು.
ಮುಂದಿನ ಮಾರ್ಚ್ ವೇಳೆಗೆ 34 ಸಾವಿರ ಕೋಟಿ ರೂಪಾಯಿ ಟೋಲ್ ಶುಲ್ಕ ಸಂಗ್ರಹವಾಗಬಹುದು. ಟೋಲ್ ಸಂಗ್ರಹಕ್ಕೆ ಜಿಪಿಎಸ್ ತಂತ್ರಜ್ಞಾನವನ್ನು ಬಳಸುವ ಮೂಲಕ ಮುಂದಿನ 5 ವರ್ಷಗಳಲ್ಲಿ ಟೋಲ್ ಆದಾಯವನ್ನು 1,34,000 ಕೋಟಿ ರೂಪಾಯಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ನಿತಿನ್ ಗಡ್ಕರಿ ಹೇಳಿದರು.