


ಪೆರುವಾಯಿ ಗ್ರಾಮ ಪಂಚಾಯತ್‌ನ 2024/25 ನೇ ಸಾಲಿನ ಎರಡನೇ ಸುತ್ತಿನ ಗ್ರಾಮಸಭೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸಾ ಪೆರುವಾಯಿಯವರ ಮೇಲೆ ಗ್ರಾಮಸ್ಥರು ಅವ್ಯವಹಾರ ನೇರ ಆರೋಪ ಮಾಡಿದ್ದಾರೆ. ಈ ವೇಳೆ ಉತ್ತರ ಕೊಡಲು ಹಿಂದೇಟು ಹಾಕಿದ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓ ಹಾಗೂ ಅಧಿಕಾರಿಗಳು ಸಭೆಯನ್ನು ಅರ್ಧದಲ್ಲೇ ಬಿಟ್ಟು ಎದ್ದು ಹೋಗಿರುವ ಬಗ್ಗೆ ವರದಿಯಾಗಿದೆ.ಕಳೆದ ಬಾರಿಯ ಗ್ರಾಮ ಸಭೆಯ ಅಂತಿಮ ಶಿಲ್ಕು ಹಾಗೂ ಈ ಬಾರಿ ಗ್ರಾಮ ಸಭೆಯ ಆರಂಭ ಶಿಲ್ಕು ಒಂದೇ ರೀತಿಯಲ್ಲಿ ಇರಬೇಕಿತ್ತು ಆದರೆ ಸ್ವಂತ ಅನುದಾನದಲ್ಲಿ 1,05,237,ನೀರು ನಿರ್ವಹಣೆಯಲ್ಲಿ 70,827 ಹಾಗೂ 15ನೇ ಹಣಕಾಸಿನಲ್ಲಿ 1,30,437 ಒಟ್ಟು 3,06,501 ರೂಪಾಯಿ ವ್ಯತ್ಯಾಸ ಕಂಡುಬಂದಿರುತ್ತದೆ. ಯಾವುದೇ ಸ್ಪಷ್ಟನೆಯನ್ನು ನೀಡದ ಅಧ್ಯಕ್ಷರ ವಿರುದ್ಧ ಗ್ರಾಮಸ್ಥ ಯತೀಶ್ ಪೆರುವಾಯಿಯವರು ಲೋಕಾಯುಕ್ತರಿಗೆ ಈ ಹಿಂದೆಯೇ ಸೂಕ್ತ ತನಿಖೆ ನಡಸುವಂತೆ ದೂರು ನೀಡಿದ್ದರು.

ಇದೇ ವಿಚಾರವಾಗಿ ಮುಂದುವರಿದ ಚರ್ಚೆ ಗ್ರಾಮ ಸಭೆಯ ಗದ್ದಲಕ್ಕೆ ಕಾರಣವಾಗಿತ್ತು. ಈ ಸಭೆಯಲ್ಲಿ ಗ್ರಾಮಸ್ಥರು ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ ಮಾಡುತ್ತಿದ್ದಂತೆಯೇ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಅರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಕೂಡಲೇ ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿದರು.ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಪಿಡಿಓ ಹಾಗೂ ಅಧಿಕಾರಿಗಳು ಸಭೆಯನ್ನು ಅರ್ಧದಲ್ಲೇ ಬಿಟ್ಟು ಎದ್ದು ಹೋಗಿ ಗ್ರಾಮ ಸಭೆ ರದ್ದಾಗಿರುವ ಬಗ್ಗೆ ವರದಿಯಾಗಿದೆ.