



ಗುರುವಾಯನಕೆರೆ: ನಕಲಿ ನಂಬರ್ ಪ್ಲೇಟ್ ಅಳವಡಿಸಿ ಕಾರಿನಲ್ಲಿ ಮೂರು ದನಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಇಬ್ಬರು ಪರಾರಿಯಾದ ಘಟನೆ ನಡೆದಿದೆ.
ಆರೋಪಿಗಳನ್ನು ಮೂಡಬಿದ್ರೆ ಸುವರ್ಣ ನಗರ ನಿವಾಸಿ ಆರಿಫ್ (26), ಮೂಡಬಿದ್ರೆ ಸುವರ್ಣ ನಗರ ನಿವಾಸಿಗಳಾಗಿದ್ದು, ರಜ್ವಾನ್ (30) ಹಾಗು ಸಾಯಿಲ್ (22) ಎಂದು ಗುರುತಿಸಲಾಗಿದೆ.
ಆ.13ರಂದು ಬೆಳಿಗ್ಗೆ, ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿದ್ದ, KA 19 MP 2084ನೇ ನೋಂದಣಿ ಸಂಖ್ಯೆಯ ಇನ್ನೋವಾ ಕಾರಿನಲ್ಲಿ ಚಿಕ್ಕಮಗಳೂರಿನ ಮುಡಗೇರಿ ಎಂಬಲ್ಲಿಂದ ಮೂರು ದನಗಳನ್ನು ಅಕ್ರಮವಾಗಿ ಹಾಗೂ ಹಿಂಸಾತ್ಮಕವಾಗಿ ತುಂಬಿಸಿಕೊಂಡು, ಚಾರ್ಮಾಡಿ ಮೂಲಕ ಮಂಗಳೂರು ಕಡೆಗೆ ಅತೀವೇಗದಲ್ಲಿ ಹಾಗೂ ದುಡುಕುತನದಲ್ಲಿ ಚಲಾಯಿಸಿಕೊಂಡು ಹೋಗಿದ್ದು, ಮಾಹಿತಿ ಪಡೆದ ಬೆಳ್ತಂಗಡಿ ಠಾಣಾ ಪೊಲೀಸರು ಗುರುವಾಯನಕೆರೆ ಎಂಬಲ್ಲಿ ಕಾರನ್ನು ನಿಲ್ಲಿಸಲು ಸೂಚಿಸಿರುತ್ತಾರೆ. ಈ ವೇಳೆ ವಾಹನವನ್ನು ನಿಲ್ಲಿಸದೇ ಪರಾರಿಯಾಗುವ ಯತ್ನಿಸಿದ ವೇಳೆ ಒಂದು ಅಟೋರಿಕ್ಷಾ ಹಾಗೂ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ನಿಂತಿರುತ್ತದೆ.
ಈ ವೇಳೆ ಪೋಲಿಸರನ್ನು ದೂಡಿಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿ ವಾಹನದಲ್ಲಿದ್ದ ಮೂವರು ಆರೋಪಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು, ಕಾರನ್ನು ಚಾಲಾಯಿಸುತ್ತಿದ್ದ ಆರಿಫ್ ಎಂಬಾತನನ್ನು ವಶಕ್ಕೆ ಪಡೆದಿರುತ್ತಾರೆ. ಇನ್ನೋವಾ ಕಾರಿನಲ್ಲಿ ಮೂರು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿರುವುದು ಕಂಡುಬಂದಿದ್ದು, ಪರಾರಿಯಾದ ಆರೋಪಿಗಳ ಬಗ್ಗೆ ವಿಚಾರಿಸಲಾಗಿ ಮೂಡಬಿದ್ರೆ ಸುವರ್ಣ ನಗರ ನಿವಾಸಿಗಳಾಗಿದ್ದು, ರಜ್ವಾನ್ (30) ಹಾಗು ಸಾಯಿಲ್ (22)ಎಂಬುದಾಗಿ ತಿಳಿದುಬಂದಿರುತ್ತದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುವುದು.








