

ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿ ಏ.೬ರಂದು ಧರ್ಮಸ್ಥಳದಲ್ಲಿ ನಡೆಸಲು ನಿರ್ಧರಿಸಲಾಗಿದ್ದ ಬೃಹತ್ ಹಕ್ಕೊತ್ತಾಯ ಸಭೆ, ಪ್ರತಿಭಟನೆಗೆ ಕರ್ನಾಟಕ ಹೈಕೋರ್ಟ್ ಆರಂಭದಲ್ಲಿ ಅನುಮತಿ ನೀಡಿದ್ದರೂ, ಈ ಸಂಬಂಧ ವಾಟ್ಸಪ್ ಮೂಲಕ ರವಾನೆಯಾಗುತ್ತಿದ್ದ ಸಂದೇಶಗಳ ಗಂಭೀರತೆಯರಿತ ನ್ಯಾಯಪೀಠ ಪ್ರತಿಭಟನೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಉದ್ದೇಶಿತ ಪ್ರತಿಭಟನೆಗೆ ಅವಕಾಶ ನೀಡದಂತೆ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ್ದ ನ್ಯಾಯಪೀಠ ಆರಂಭದಲ್ಲಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿತ್ತು.ಆದರೆ ಉದ್ದೇಶಿತ ಪ್ರತಿಭಟನೆಗೆ ಸಂಬಂಧಿಸಿ ವಾಟ್ಸಾಪ್ ಮೂಲಕ ರವಾನೆಯಾಗುತ್ತಿದ್ದ ಕೆಲವು ಸಂದೇಶಗಳು, ಬಹುಸಂಖ್ಯೆಯಲ್ಲಿ ಜನರನ್ನು ಕರೆಸಿಕೊಂಡು ದೇವಸ್ಥಾನ ಪ್ರವೇಶಿಸುವ ಯತ್ನಗಳ ಬಗ್ಗೆ ಸೂಚನೆ ನೀಡಿರುವುದರಿಂದ,ಈ ಘಟನೆಗಳ ಮೂಲಕ ನ್ಯಾಯಾಲಯದ ಹಿಂದಿನ ಆದೇಶ ಉಲ್ಲಂಘನೆ ಆಗಬಹುದು ಮತ್ತು ಸಾರ್ವಜನಿಕ ಶಾಂತಿಗೆ ತೊಂದರೆ ಉಂಟುಮಾಡಬಹುದು ಎಂದು ಧರ್ಮಸ್ಥಳದ ಪರ ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು.ಪರಿಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯ, ಏ.6ರ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಆದೇಶ ನೀಡಿದೆ.