ಮುಂಬೈ: ಹಬ್ಬಗಳ ಸಂದರ್ಭದಲ್ಲಿ ಬಳಸುವ ಡಿಜೆ ಸೌಂಡ್, ಲೇಸರ್ ಲೈಂಟಿಗ್ಸ್‌ಗೆ ನಿಷೇಧ ಹೇರಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೇ ಹೈಕೋರ್ಟ್ ತಿರಸ್ಕರಿಸಿದೆ. ಗಣೇಶ ಹಬ್ಬಕ್ಕೆ ಈ ಡಿಜೆ, ಲೇಸರ್ ಬಳಕೆ ಹಾನಿಯಾಗಿದ್ದರೆ, ಈದ್ ಮಿಲಾದ್‌ಗೂ ಹಾನಿಕಾರವಾಗಿದೆ. ಇಂತಹ ಅರ್ಜಿ ಸಲ್ಲಿಸುವ ಮೊದಲು ಈ ಕುರಿತು ಅಧ್ಯಯನ ಮಾಡಿ ಅರ್ಜಿ ಸಲ್ಲಿಸಬೇಕು ಎಂದು ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿರುದ್ಧ ಕಿಡಿಕಾರಿದೆ.
ಅರ್ಜಿದಾರರು ಪ್ರಮುಖವಾಗಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬಳಸುವ ಡಿಜೆ ಸೌಂಡ್, ಲೇಸರ್ ಲೈಟಿಂಗ್ಸ್‌ನಿಂದ ಮನುಷ್ಯನ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ಇಸ್ಲಾಂನ ಖುರಾನ್ ಹಾಗೂ ಹದೀಸ್‌ಗಳಲ್ಲಿ ಈ ರೀತಿ ಡಿಜೆ, ಲೇಸರ್ ಬಳಕೆಯ ಉಲ್ಲೇಖಗಳಿಲ್ಲ. ಹೀಗಾಗಿ ಈ ಹಾನಿಕಾರಗಳ ಬಳಕೆಗೆ ನಿರ್ಬಂಧ ಹೇರಲು ಕೋರ್ಟ್ ಆದೇಶ ನೀಡಬೇಕು ಎಂದು ಅರ್ಜಿಯಲ್ಲಿ ಆಗ್ರಹಿಸಲಾಗಿತ್ತು. ಚೀಫ್ ಜಸ್ಟೀಸ್ ಡಿಕೆ ಉಪಾಧ್ಯಾಯ, ಜಸ್ಟೀಸ್ ಅಮಿತ್ ಬೋಕರ್ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿದ್ದು ಗಣೇಶ ಹಬ್ಬಕ್ಕೆ ಡಿಜೆ ಸೌಂಡ್, ಲೇಸರ್ ಲೈಂಟಿಂಗ್ ಬಳಕೆ ಹಾನಿಕಾರವಾಗಿದ್ದರೆ, ಈದ್ ಮಿಲಾದ್ ಮೆರವಣಿಗೆಗೂ ಹಾನಿಕಾರವಾಗಿದೆ ಎಂದಿದೆ.
ವಿಚಾರಣೆ ವೇಳೆ ಪಿಐಎಲ್ ಅರ್ಜಿದಾರರ ಪರ ವಕೀಲ ಒವೈಸ್ ಪೆಚ್‌ಕಾರ್, ಗಣೇಶ ಹಬ್ಬದ ವೇಳೆ ಬಳಸುವ ವಿಪರೀತ ಶಬ್ದ ಬಳಕೆಗೆ ಈಗಾಗಲೇ ನಿರ್ಬಂಧ ಹೇರಿರುವ ಆದೇಶವನ್ನು ಉಲ್ಲೇಖಿಸಿದ್ದಾರೆ.ಈ ಕುರಿತು ಪೀಠ ಮಹತ್ವದ ವಿಚಾರ ಮುಂದಿಟ್ಟಿದೆ. ಲೇಸರ್ ಲೈಟಿಂಗ್ಸ್ ಆರೋಗ್ಯಕ್ಕೆ ಹಾನಿಕಾರಕ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದೀರಿ. ಇದಕ್ಕೆ ಆಧಾರಗಳೇನು? ಯಾವುದಾದರೂ ಉದಾಹರಣೆಗಳಿವೆಯಾ? ಈ ಅರ್ಜಿ ಸಲ್ಲಿಕೆ ಮೊದಲು ಈ ಕುರಿತು ಅಧ್ಯಯನ ನಡೆಸಬೇಕು. ಬಳಿಕ ಈ ಲೈಟಿಂಗ್ಸ್ ಈ ರೀತಿಯ ಪರಿಣಾಮ ಬೀರಲಿದೆ ಅನ್ನೋ ಮಾಹಿತಿಯನ್ನು ಆಧಾರ ಸಹಿತ ನೀಡಬೇಕು. ಕೋರ್ಟ್‌ನಲ್ಲಿರುವರು ಎಲ್ಲದರಲ್ಲೂ ಜ್ಞಾನಿಗಳಲ್ಲ. ಆದರೆ ಯಾವುದೇ ಅಧ್ಯಯನಗಳಿಲ್ಲದೆ ಸುಮ್ಮನೆ ಅರ್ಜಿ ಸಲ್ಲಿಸುವ ಪರಿಪಾಠ ಹೆಚ್ಚಾಗುತ್ತಿದೆ ಎಂದು ಹೈಕೋರ್ಟ್ ಗರಂ ಆಗಿದೆ. ಬಳಿಕ ಅರ್ಜಿ ತಿರಸ್ಕರಿಸಿದ ಹೈಕೋರ್ಟ್, ಈ ರೀತಿಯ ಅರ್ಜಿಗಳನ್ನು ಆಧಾರವಾಗಿಟ್ಟುಕೊಂಡು ಸಾರ್ವಜನಿಕ ಹಬ್ಬಗಳಿಗೆ ನಿರ್ದೇನ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.