Friday, June 26, 2026
spot_imgspot_img
spot_imgspot_img

ಉಳ್ಳಾಲ: ಬಾವಿ ಕೊರೆಯುವ ವೇಳೆ ಭೀಕರ ದುರಂತ – ಕಬ್ಬಿಣದ ಬಕೆಟ್ ತಲೆಗೆ ಬಿದ್ದು ಕಾರ್ಮಿಕ ಸಾವು

- Advertisement -
- Advertisement -

ಉಳ್ಳಾಲ, ಮಾ. 28: ಬಾವಿ ಕೊರೆಯುವ ಕಾಮಗಾರಿ ವೇಳೆ ಕ್ರೇನ್‌ನಿಂದ ಬೇರ್ಪಟ್ಟ ಮಣ್ಣು ತುಂಬಿದ ಕಬ್ಬಿಣದ ಬಕೆಟ್ ತಲೆಗೆ ಬಿದ್ದ ಪರಿಣಾಮ ಯುವ ಕಾರ್ಮಿಕನೋರ್ವ ದುರ್ಘಟನೆಯಲ್ಲಿ ಮೃತಪಟ್ಟ ಘಟನೆ ಕುತ್ತಾರು ಪದವಿನ ಸಲಾತ್ ನಗರದಲ್ಲಿ ಶುಕ್ರವಾರ ಸಂಜೆ ನಡೆದಿದೆ.ಮೃತರನ್ನು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಲ್ಲಾಪುರ ನಿವಾಸಿ ಶಿವಕುಮಾರ್ ಜಿ.ಕೆ (30) ಎಂದು ಗುರುತಿಸಲಾಗಿದೆ.

ಕುತ್ತಾರು ಸಲಾತ್ ನಗರದ ಖಾಲಿ ಜಾಗದಲ್ಲಿ ಹೊಸ ಬಾವಿ ಅಗೆಯುವ ಕೆಲಸ ನಡೆಯುತ್ತಿದ್ದು, ಆರು ಮಂದಿ ಕಾರ್ಮಿಕರಲ್ಲಿ ಶಿವಕುಮಾರ್ ಸೇರಿದಂತೆ ಮೂವರು ಸುಮಾರು 30 ಅಡಿ ಆಳದ ಬಾವಿಯೊಳಗೆ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕ್ರೇನ್ ಮೂಲಕ ಮಣ್ಣನ್ನು ತುಂಬಿದ ಬಕೆಟ್ ಅನ್ನು ಮೇಲಕ್ಕೆ ಎತ್ತುವಾಗ, ಏಕಾಏಕಿ ಅದು ಕೊಕ್ಕೆಯಿಂದ ತಪ್ಪಿ ಕೆಳಗೆ ಬಿದ್ದಿದೆ.ಭಾರೀ ಗಾತ್ರದ ಕಬ್ಬಿಣದ ಬಕೆಟ್ ನೇರವಾಗಿ ಶಿವಕುಮಾರ್ ಅವರ ತಲೆಗೆ ಬಡಿದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡರು. ತಕ್ಷಣವೇ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಘಟನೆಯಲ್ಲಿ ಬಾವಿಯೊಳಗಿದ್ದ ಇತರ ಇಬ್ಬರು ಕಾರ್ಮಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ಮೃತ ಶಿವಕುಮಾರ್ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ. ಕೇವಲ ಎರಡು ವಾರಗಳ ಹಿಂದಷ್ಟೇ ತಮ್ಮ ಕಿರಿಯ ಮಗಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದ ಅವರು, ಘಟನೆಗೆ ಮುನ್ನ ದಿನವೇ ಪತ್ನಿ-ಮಕ್ಕಳನ್ನು ಊರಿಗೆ ಕಳುಹಿಸಿದ್ದರೆಂಬ ಮಾಹಿತಿ ತಿಳಿದುಬಂದಿದೆ.ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

- Advertisement -

Related news

error: Content is protected !!