Wednesday, July 22, 2026
spot_imgspot_img
spot_imgspot_img

ಅಂತರ್ ರಾಜ್ಯ ವಾಹನ ಕಳ್ಳತನ ಹಾಗೂ ಸರಗಳ್ಳತನ: ಇಬ್ಬರು ಆರೋಪಿಗಳ ಬಂಧನ

- Advertisement -
- Advertisement -

ಮಂಗಳೂರು: ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್‌ನ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಯಮಹಾ FZ ಮೋಟಾರ್ ಬೈಕ್ ಕಳ್ಳತನ ಹಾಗೂ ವಯೋವೃದ್ಧ ಮಹಿಳೆಯಿಂದ ಚಿನ್ನದ ಸರ ಕಸಿದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸರು ಇಬ್ಬರು ಅಂತರ್ ರಾಜ್ಯ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದಿನಾಂಕ 12-12-2025 ರಂದು KA-19-ER-7755 ಸಂಖ್ಯೆಯ ಯಮಹಾ FZ ಬೈಕ್ ಕಳ್ಳತನವಾದ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣದ ತನಿಖೆಯ ವೇಳೆ ದೊರೆತ ಖಚಿತ ಮಾಹಿತಿಯ ಆಧಾರದಲ್ಲಿ, ದಿನಾಂಕ 16-12-2025 ರಂದು ಆರೋಪಿಗಳಾದ ಪೈಸಲ್ @ ತೋಟ ಪೈಸಲ್ ಹಾಗೂ ನಿತೀನ್ ಕುಮಾರ್ (ಮೈಸೂರು) ಅವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆ ವೇಳೆ, ಆರೋಪಿಗಳು ದಿನಾಂಕ 13-12-2025 ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ಡಿ ಹಿತ್ಲು ಬೆಳಕೆ ಪ್ರದೇಶದಲ್ಲಿ 70 ವರ್ಷದ ವಯೋವೃದ್ಧ ಮಹಿಳೆ ಶ್ರೀಮತಿ ಹೊನ್ನಮ್ಮ ಮಹಾದೇವ ನಾಯ್ಕ್ ಅವರ ಕುತ್ತಿಗೆಯಿಂದ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲೂ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ ಸುಮಾರು ರೂ. 1.20 ಲಕ್ಷ ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ರೂ. 45 ಸಾವಿರ ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು ರೂ. 1.65 ಲಕ್ಷ ಮೌಲ್ಯದ ಸೊತ್ತು ಪತ್ತೆಯಾಗಿದೆ.

ಬಂಧಿತ ಆರೋಪಿಗಳ ವಿವರ: ಉಳ್ಳಾಲದ ನ್ಯೂ ತೋಟ ನಿವಾಸಿ ಪೈಸಲ್ @ ತೋಟ ಪೈಸಲ್ (ತಂದೆ: ಇಬ್ರಾಹಿಂ) ಹಾಗೂ ಮೈಸೂರಿನ ವಿನಾಯಕ ನಗರ ನಿವಾಸಿ ನಿತೀನ್ ಕುಮಾರ್ (ತಂದೆ: ವೈ.ಎನ್. ನಾಗೇಶ್).

ಪೈಸಲ್ @ ತೋಟ ಪೈಸಲ್ ವಿರುದ್ಧ ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ಕೇರಳ ರಾಜ್ಯಗಳಲ್ಲಿ ರಾಬರಿ, ದರೋಡೆ, ಕಳ್ಳತನ ಮತ್ತು ಕೊಲೆ ಪ್ರಕರಣ ಸೇರಿ ಸುಮಾರು 42 ಪ್ರಕರಣಗಳು ದಾಖಲಾಗಿದ್ದು, ವಿವಿಧ ನ್ಯಾಯಾಲಯಗಳಲ್ಲಿ 10ಕ್ಕೂ ಹೆಚ್ಚು ಜಾಮೀನು ರಹಿತ ವಾರೆಂಟ್‌ಗಳು ಬಾಕಿ ಇದ್ದವು ಎನ್ನಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಅನಂತ ಪದ್ಮನಾಭ, ಪಿಎಸ್ಐ ಮನೋಹರ್ ಪ್ರಸಾದ್, ಎಎಸ್‌ಐಗಳು, ಹೆಡ್ ಕಾನ್ಸ್‌ಟೇಬಲ್‌ಗಳು ಹಾಗೂ ಕದ್ರಿ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

- Advertisement -

Related news

error: Content is protected !!