




ಟೆಹ್ರಾನ್: ಕುವೈತ್‌ನ ವಿದ್ಯುತ್ ಸ್ಥಾವರ ಮತ್ತು ನಿರ್ಲವಣೀಕರಣ ಘಟಕದ ಮೇಲೆ ಇರಾನ್ ದಾಳಿ ನಡೆಸಿದ್ದು, ದಾಳಿಯಲ್ಲಿ ಭಾರತೀಯ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ದಾಳಿಯಿಂದ ವಿದ್ಯುತ್ ಘಟಕದ ಕಟ್ಟಡವೊಂದಕ್ಕೆ ಭಾರೀ ಹಾನಿಯಾಗಿದೆ ಎನ್ನಲಾಗಿದೆ.
ಭಾನುವಾರ ಸಂಜೆ ಈ ಘಟನೆ ಸಂಭವಿಸಿದ್ದು, ಇದು ದೇಶದ ಮೇಲೆ ಇರಾನ್ ನಡೆಸಿದ ಅತಿದೊಡ್ಡ ಆಕ್ರಮಣಗಳಲ್ಲಿ ಒಂದಾಗಿದೆ ಎಂದು ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.
ಇಸ್ರೇಲ್‌ನತ್ತ ಉಡಾಯಿಸಲಾದ ಕ್ಷಿಪಣಿಗಳ ಮೂಲಕ ʻಭಾರತದ ಜನರಿಗೆ ಧನ್ಯವಾದಗಳುʼ ಎಂದು ಇರಾನ್ ಹೇಳಿದ ಮರುದಿನವೇ ಈ ಘಟನೆ ನಡೆದಿದ್ದು, ಘಟನೆಯ ಬಗ್ಗೆ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ವಿದೇಶಾಂಗ ಸಚಿವಾಲಯ ತಕ್ಷಣದ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್ ಮತ್ತು ಇತರ ದೇಶಗಳ ಮೇಲೆ ಉಡಾಯಿಸಲಾದ ಕ್ಷಿಪಣಿಗಳ ಮೇಲೆ ಭಾರತ, ಜರ್ಮನಿ, ಪಾಕಿಸ್ತಾನ ಮತ್ತು ಸ್ಪೇನ್ ದೇಶಗಳಿಗೆ ಧನ್ಯವಾದ ಅರ್ಪಿಸುವ ಕೈಬರಹದ ಚೀಟಿಗಳನ್ನು ಇರಾನ್ ಅಂಟಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಸ್ರೇಲ್ ಮೇಲಿನ ದಾಳಿ ಕುರಿತಂತೆ ಮುಂಬೈಯಲ್ಲಿರುವ ಇರಾನ್‌ನ ಕಾನ್ಸುಲೇಟ್ ಕಚೇರಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ‘ಕ್ಷಿಪಣಿಗಳ ಮೇಲೆ ಭಾರತ, ಪಾಕಿಸ್ತಾನ, ಸ್ಪೇನ್ ಹಾಗೂ ಜರ್ಮನಿ ದೇಶದ ಜನರಿಗೆ ಧನ್ಯವಾದಗಳು’ ಎಂದು ಬರೆದಿರುವ ಫೋಟೊಗಳನ್ನೂ ಹಂಚಿಕೊಂಡಿತ್ತು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








