Friday, April 26, 2024
spot_imgspot_img
spot_imgspot_img

ಹಿರಿಯ ಕವಿ ಡಾ‌.ವಿ.ಸಿ. ಐರಸಂಗ ನಿಧನ

- Advertisement -G L Acharya panikkar
- Advertisement -

ಧಾರವಾಡ,ನ(13): ಪ್ರೀತಿಯಿಂದ ‘ಐರಸಂಗ ಕಾಕಾ’ ಎಂದೇ ಕರೆಸಿಕೊಳ್ಳುತ್ತಿದ್ದ ಹಿರಿಯ ಕವಿ ಡಾ‌.ವಿ.ಸಿ. ಐರಸಂಗ (91) ಶುಕ್ರವಾರ ನಿಧನರಾದರು.


ಆಕಾಶವಾಣಿಯ ಭಾವಸಂಗಮದ ಹಾಡುಗಳ ಮೂಲಕ ನಾಡಿನ ಬಹುಪಾಲು ಶೋತೃಗಳಿಗೆ ಚಿರಪರಿಚಿತರಾಗಿದ್ದ ಐರಸಂಗ ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಅವರಿಗೆ ಮಗ, ಮಗಳು, ಮೊಮ್ಮಕ್ಕಳಿದ್ದಾರೆ. ಮೃತರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 11.30ಕೈ ಹೊಸ ಯಲ್ಲಾಪೂರ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.


ಜನಸಾಮಾನ್ಯರೊಂದಿಗಿದ್ದೇ ಕಾವ್ಯಲೋಕದ ಕಣಿ ಎನಿಸಿಕೊಂಡಿದ್ದ ಅವರು, ತಮ್ಮ ಜೀವನದುದ್ದಕ್ಕೂ ಬಡತನದ ಹಾಸಿಗೆಯಲ್ಲೇ ಮಲಗಿ ಎದ್ದವರು. ಸುಮಾರು ಆರು ದಶಕಗಳ ಕಾಲ ಕಾವ್ಯ ಕೃಷಿ ಮಾಡಿದ್ದ ಅವರು, 50ಕ್ಕೂ ಹೆಚ್ಚು ಕವನ ಸಂಕಲನಗಳನ್ನು ರಚಿಸಿದ್ದರು. ಮಾರುತಿ ಪ್ರಕಾಶನ ಸಂಸ್ಥೆಯನ್ನು ಅವರೇ ಹುಟ್ಟುಹಾಕಿದ್ದರು. ಧಾರವಾಡದ ಕರ್ಣಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದ ಅವರು ಸೈಕಲ್’ನಲ್ಲೇ ಬಂದು ಗಮನ ಸೆಳೆದಿದ್ದರು.

ಸದಾಕಾಲ ಸೈಕಲ್’ನೊಂದಿಗೇ ಜೀವನ ಸಾಗಿಸುತ್ತಿದ್ದ ಅವರನ್ನು ಜನರು ‘ಸೈಕಲ್ ಕವಿ’ ಎಂದೇ ಕರೆಯುತ್ತಿದ್ದರು.
ಅವರ ಬದುಕು ಸರಳ, ಸುಂದರ. ತಾವು ಬರೆದ ಕವನ ಸಂಕಲಗಳನ್ನು ಜೋಳಿಗೆಯಲ್ಲಿ ಹಾಕಿಕೊಂಡು, ಧಾರವಾಡದ ಅತ್ತಿಕೊಳ್ಳದ ದಿನ್ನೆ ಹತ್ತಿ, ಶ್ರೀರಾಮನಗರದ ಏರುಗಳಲ್ಲಿ ಸೈಕಲ್ ದೂಡಿಕೊಂಡು, ಒಬ್ಬ ಸಾಮಾನ್ಯ ಮನುಷ್ಯನಂತೆ ಅವರು ನಡೆದುಕೊಂಡು ಹೋಗುತ್ತಿದ್ದರೆ ಆತ್ಮೀಯತೆಯಿಂದ ಜನರು ಅವರನ್ನು ದಿಟ್ಟಿಸುತ್ತಿದ್ದರು.
1947ರಲ್ಲಿ ಬರೆದ ’ಸುಪ್ರಭಾತ’ ಅವರ ಮೊದಲ ಕವನ ಸಂಕಲನ. ಅವರ ಮನೆಯಲ್ಲಿ ನಡೆಯುತ್ತಿದ್ದ ಪೂಜೆ, ಭಜನೆಗಳೇ ಅವರ ಕಾವ್ಯಕ್ಕೆ ಸ್ಫೂರ್ತಿಯಾಗಿತ್ತು.

ದೇಶಭಕ್ತಿ, ನಾಡಗೀತೆ, ಪೌರಾಣಿಕ, ಪ್ರೀತಿ, ಪ್ರೇಮ, ವಿರಹ, ವಿಡಂಬನೆ, ಮಕ್ಕಳ ಸಾಹಿತ್ಯ ಹೀಗೇ ವೈವಿಧ್ಯಮಯ ವಿಷಯಗಳ ಕುರಿತು ಕಾವ್ಯ ಸೃಷ್ಟಿಸಿದ್ದು ಐರಸಂಗರ ವೈಶಿಷ್ಟ್ಯ. ಪಂ.ಮಾಧವ ಗುಡಿ, ಬಾಲಚಂದ್ರ ನಾಕೋಡ, ಸಂಗೀತಾ ಕಟ್ಟಿ, ಪರಮೇಶ್ವರ ಹೆಗಡೆ ಮುಂತಾದವರು ಐರಸಂಗರ ಕಾವ್ಯಕ್ಕೆ ದನಿಯಾಗಿದ್ದಾರೆ.

- Advertisement -

Related news

error: Content is protected !!