Friday, September 4, 2026
spot_imgspot_img
spot_imgspot_img

ಕಾರ್ಕಳ: ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ ಪ್ರಕರಣ – ಶಾಸಕರಿಂದ ಗಂಭೀರ ಆರೋಪ

- Advertisement -
- Advertisement -

ಕಾರ್ಕಳ: ಬೈಲೂರುದಲ್ಲಿರುವ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಥೀಮ್ ಪಾರ್ಕ್‌ನ ಬಾಗಿಲು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿಗೆ ಅಳವಡಿಸಲಾಗಿದ್ದ ತಾಮ್ರದ ಹೊದಿಕೆಯನ್ನು ಕಿತ್ತು ಕಳ್ಳತನ ಮಾಡಿದ್ದಾರೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಆರೋಪಿಸಿದ್ದಾರೆ.


ಈ ಕುರಿತು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇದು ಕಾರ್ಕಳದ ಇತಿಹಾಸದಲ್ಲೇ ದುರ್ಘಟನೆಯ ದಿನ ಎಂದು ತಿಳಿಸಿದ್ದಾರೆ. ಕ್ಷೇತ್ರವನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶದಿಂದ ಆರಂಭಿಸಿದ್ದ ಮಹತ್ವಾಕಾಂಕ್ಷಿ ಯೋಜನೆ ಕಳೆದ ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗದೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದು ಅವರು ದೂರಿದ್ದಾರೆ.


ಯೋಜನೆಯ ಅಭಿವೃದ್ಧಿಗೆ ಅಗತ್ಯ ಹಣ ಬಿಡುಗಡೆ ಮಾಡದೆ ಪಾರ್ಕ್‌ನ್ನು ನಿರ್ವಹಣೆಯಿಲ್ಲದೆ ಬಿಡಲಾಗಿದ್ದು, ಇದರಿಂದಾಗಿ ಪ್ರವಾಸಿಗರು ಮತ್ತು ವಿದ್ಯಾರ್ಥಿಗಳು ಭೇಟಿ ನೀಡಬೇಕಿದ್ದ ಸ್ಥಳ ಇಂದು ಪಾಳುಬಿದ್ದ ಸ್ಥಿತಿಗೆ ತಲುಪಿದೆ ಎಂದು ಹೇಳಿದ್ದಾರೆ. ಇದೇ ನಿರ್ಲಕ್ಷ್ಯದ ಪರಿಣಾಮವಾಗಿ ಕಳ್ಳರು ಪಾರ್ಕ್‌ಗೆ ನುಗ್ಗಿ ಮೇಲ್ಛಾವಣಿಯ ತಾಮ್ರದ ಹೊದಿಕೆಯನ್ನು ಕದ್ದೊಯ್ದಿದ್ದಾರೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಇದಲ್ಲದೆ, ಪಾರ್ಕ್‌ಗೆ ಸಾರ್ವಜನಿಕ ಪ್ರವೇಶವನ್ನು ಸೆಪ್ಟೆಂಬರ್ 2023ರಲ್ಲಿ ನಿಷೇಧಿಸಿ ಸ್ಥಳೀಯ ಆಡಳಿತ ಆದೇಶ ಹೊರಡಿಸಿದ್ದರೂ, ಕೆಲವರು ಅಕ್ರಮವಾಗಿ ಒಳನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದರು. ಈ ಎಲ್ಲದಕ್ಕೂ ಮಧ್ಯೆ ಕಳ್ಳತನ ನಡೆದಿರುವುದು ಜಿಲ್ಲಾಡಳಿತದ ವೈಫಲ್ಯವನ್ನೇ ತೋರಿಸುತ್ತದೆ ಎಂದು ಸುನಿಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮವಾಗಿ ವಿಡಿಯೋ ಮಾಡಿದವರನ್ನೂ ವಿಚಾರಣೆಗೆ ಒಳಪಡಿಸುವ ಜೊತೆಗೆ, ಕಳ್ಳತನ ನಡೆಸಿದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಅವರು ಆಗ್ರಹಿಸಿದ್ದಾರೆ.

- Advertisement -

Related news

error: Content is protected !!