Tuesday, April 23, 2024
spot_imgspot_img
spot_imgspot_img

ಇಂದು ಬಿಜೆಪಿ ಸಂಸದೀಯ ಮಂಡಳಿ ಸಭೆ; ಈ 9 ನಾಯಕರಲ್ಲಿ ಯಾರಾಗ್ತಾರೆ ಕರ್ನಾಟಕದ ಹೊಸ ಮುಖ್ಯಮಂತ್ರಿ

- Advertisement -G L Acharya panikkar
- Advertisement -

ನವದೆಹಲಿ: ಕರ್ನಾಟಕದಲ್ಲಿ ನಿನ್ನೆ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ನಾಯಕತ್ವ ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಕೆಲವು ತಿಂಗಳುಗಳಿಂದಲೂ ಹರಿದಾಡುತ್ತಲೇ ಇದ್ದವು.

ಆದರೆ, ಖುದ್ದು ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲಿ ಸದ್ಯಕ್ಕೆ ಯಡಿಯೂರಪ್ಪನವರನ್ನು ಬದಲಾವಣೆ ಮಾಡುವ ಯೋಚನೆಯಿಲ್ಲ, ಪೂರ್ಣಾವಧಿಗೆ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಘೋಷಿಸಿತ್ತು. ಇತ್ತ ಯಡಿಯೂರಪ್ಪ ಕೂಡ ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಪ್ರಶ್ನೆಯೇ ಇಲ್ಲ ಎಂದು ದೆಹಲಿಯಿಂದಲೇ ತಮ್ಮ ವಿರೋಧಿ ಬಣಕ್ಕೆ ಖಡಕ್ ಸಂದೇಶ ರವಾನಿಸಿದ್ದರು.

ಆದರೆ, 2-3 ದಿನಗಳ ಹಿಂದೆ ರಾಜೀನಾಮೆಯ ಸುಳಿವು ನೀಡಿದ್ದ ಯಡಿಯೂರಪ್ಪ ನಿನ್ನೆ ಮಧ್ಯಾಹ್ನ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹಾಗಾದರೆ, ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರಾಗಲಿದ್ದಾರೆ? ಎಂಬುದು ಸದ್ಯಕ್ಕೆ ಎಲ್ಲರ ಮುಂದಿರುವ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಮುಖ್ಯಮಂತ್ರಿ ಸ್ಥಾನಕ್ಕೆ ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪನವರನ್ನು ಹೊರತುಪಡಿಸಿದರೆ ಅವರಷ್ಟು ವರ್ಚಸ್ಸು ಇರುವ ಮತ್ತೋರ್ವ ನಾಯಕ ಇಲ್ಲವೆಂಬ ಸತ್ಯ ಗುಟ್ಟಾಗೇನೂ ಉಳಿದಿಲ್ಲ. ಹೀಗಾಗಿ, ಯಡಿಯೂರಪ್ಪನವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರು ಬಾಯಿಂದಲೇ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಿಸುವ ಮೂಲಕ ಮುಂದಾಗಬಹುದಾದ ಬಿಕ್ಕಟ್ಟು, ಯಡಿಯೂರಪ್ಪನವರ ಅನುಯಾಯಿಗಳ ವಿರೋಧದಿಂದ ತಪ್ಪಿಸಿಕೊಳ್ಳಲು ಹೈಕಮಾಂಡ್ ಪ್ಲಾನ್ ಮಾಡಿದೆ ಎನ್ನಲಾಗಿದೆ.

ಇಂದು ದೆಹಲಿಯಲ್ಲಿ ಮಹತ್ವದ ಸಂಸದೀಯ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ ಸೇರಿ ಕೆಲವು ನಾಯಕರು ಭಾಗಿಯಾಗಲಿದ್ದಾರೆ. ಈ ಸಭೆಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬುದು ನಿರ್ಧಾರವಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಕರ್ನಾಟಕದ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಸಂಸದೀಯ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯ ಹೆಸರು ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ. ಹೀಗಾಗಿ, ಕರ್ನಾಟಕದ ನೂತನ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆ ಇಂದು ಶುರುವಾಗಲಿದೆ.

ಇದರ ಬೆನ್ನಲ್ಲೇ ಬುಧವಾರ ಬೆಂಗಳೂರಿನಲ್ಲಿ ಶಾಸಕಾಂಗ ಪಕ್ಷದ ಸಭೆಯೂ ನಡೆಯುವ ಸಾಧ್ಯತೆಯಿದ್ದು, ದೆಹಲಿಯಿಂದ ಹೈಕಮಾಂಡ್​ನ ಪ್ರತಿನಿಧಿಯಾಗಿ ಬರಲಿರುವ ನಾಯಕರೊಬ್ಬರು ಈ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಘೋಷಣೆ ಮಾಡಲಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಬಿಜೆಪಿಯ ಎಲ್ಲ ಶಾಸಕರಿಗೂ ಮುಂದಿನ ಮುಖ್ಯಮಂತ್ರಿಯ ಬಗ್ಗೆ ತಿಳಿಸಲಿದ್ದಾರೆ. ಈ ಮೂಲಕ ಶಾಸಕಾಂಗ ಪಕ್ಷದ ಸಭೆಯಲ್ಲೇ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸಲಾಯಿತು ಎಂಬಂತೆ ಬಿಂಬಿಸಿ, ಬುಧವಾರ ನೂತನ ಮುಖ್ಯಮಂತ್ರಿಯ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ. ಗುರುವಾರ ಅಥವಾ ಶುಕ್ರವಾರ ಕರ್ನಾಟಕದ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ.

ಯಾರಾಗಲಿದ್ದಾರೆ ನೂತನ ಮುಖ್ಯಮಂತ್ರಿ?:

ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಯಡಿಯೂರಪ್ಪ ರವರಿಂದ ತೆರವಾದ ಮುಖ್ಯಮಂತ್ರಿ ಸ್ಥಾನದಲ್ಲಿ ಲಿಂಗಾಯತ ನಾಯಕರನ್ನೇ ಕೂರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡಿದೆ. ಲಿಂಗಾಯತ ಸಮುದಾಯದ ನಾಯಕರಾಗಿರುವ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಬೇರೊಬ್ಬರನ್ನು ಸಿಎಂ ಆಗಿ ಮಾಡಿದರೆ ಆ ಸಮುದಾಯದಲ್ಲಿ ಆಕ್ರೋಶಗಳು ಏಳುವ ಸಾಧ್ಯತೆ ಇರುವುದರಿಂದ ಮತ್ತು ಲಿಂಗಾಯತ ಸ್ವಾಮೀಜಿಗಳ ಒತ್ತಡವೂ ಹೆಚ್ಚಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಇತರೆ ಸಮುದಾಯದ ಕೆಲವು ಪ್ರಭಾವಿ ನಾಯಕರ ಹೆಸರೂ ಸಿಎಂ ಸ್ಥಾನದ ರೇಸ್​ನಲ್ಲಿವೆ.

ಬಿಜೆಪಿ ಹೈಕಮಾಂಡ್ ಈಗಾಗಲೇ 3 ಲಿಂಗಾಯತ ನಾಯಕರು ಸೇರಿ 9 ನಾಯಕರ ಹೆಸರನ್ನು ಅಂತಿಮಗೊಳಿಸಿದ್ದು, ಅವರಲ್ಲಿ ಯಾರು ಸಿಎಂ ಪಟ್ಟವೇರಲಿದ್ದಾರೆ ಎಂಬ ಕುತೂಹಲಕ್ಕೆ ಇಂದಿನ ಸಂಸದೀಯ ಮಂಡಳಿ ಸಭೆಯಲ್ಲಿ ತೆರೆ ಬೀಳುವ ಸಾಧ್ಯತೆಯಿದೆ. 2023ರಲ್ಲಿ ನಡೆಯುವ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಯಡಿಯೂರಪ್ಪನವರ ಉತ್ತರಾಧಿಕಾರಿಯಾಗಿ ಲಿಂಗಾಯತ ಸಮುದಾಯದ ನಾಯಕನಿಗೆ ಸಿಎಂ ಪಟ್ಟ ಕಟ್ಟಲು ಬಿಜೆಪಿ ತಯಾರಿ ನಡೆಸುತ್ತಿದೆ.

ಪಂಚಮಸಾಲಿ ಲಿಂಗಾಯತ ಸಮುದಾಯದ ನಾಯಕರಾದ ಧಾರವಾಡದ ಶಾಸಕ ಅರವಿಂದ್ ಬೆಲ್ಲದ್, ಸಚಿವರಾದ ಮುರುಗೇಶ್ ನಿರಾಣಿ, ಬಸವರಾಜ ಬೊಮ್ಮಾಯಿ ಅವರ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬರುತ್ತಿವೆ. ಇವರ ಮೂಲಕ ಲಿಂಗಾಯತ ಸಮುದಾಯವನ್ನು ಒಗ್ಗೂಡಿಸಿದರೆ ಮುಂದಿನ ಚುನಾವಣೆಗೆ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿದೆ ಹೈಕಮಾಂಡ್.

ಇದಿಷ್ಟೇ ಅಲ್ಲದೆ, ಲಿಂಗಾಯತರಲ್ಲದ ಬೇರೆ ನಾಯಕರ ಹೆಸರೂ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿಬಂದಿವೆ. ಈ ಬಾರಿ ಬ್ರಾಹ್ಮಣ ಸಮುದಾಯದ ನಾಯಕನಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಕೂಡ ಬಿಜೆಪಿ ನಾಯಕರು ಯೋಚನೆ ಮಾಡಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬಂದಿವೆ. ಹಾಗೇನಾದರೂ ಆದರೆ, ಕೇಂದ್ರ ಸಚಿವರಾದ ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ ಅಥವಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮುಖ್ಯಮಂತ್ರಿ ಪಟ್ಟ ಒಲಿಯುವ ಸಾಧ್ಯತೆಗಳಿವೆ. ಇನ್ನು, ಕರ್ನಾಟಕದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದವರಿಗೂ ಸಿಎಂ ಸ್ಥಾನ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಒಕ್ಕಲಿಗ ಸಮುದಾಯದ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಿ.ಟಿ. ರವಿ, ಆರ್. ಅಶೋಕ್, ಸಿ.ಎನ್. ಅಶ್ವಥ್ ನಾರಾಯಣ ಅವರ ಹೆಸರುಗಳಿವೆ. ಈ 9 ಜನರಲ್ಲಿ ಒಬ್ಬರು ಮುಖ್ಯಂಂತ್ರಿಯಾಗುವುದು ಖಚಿತ ಎನ್ನಲಾಗುತ್ತಿದೆ.

ನೂತನ ಮುಖ್ಯಮಂತ್ರಿ ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ನನ್ನ ಪಾತ್ರವೇನೂ ಇಲ್ಲ ಎಂದು ಈಗಾಗಲೇ ಬಿಎಸ್ ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಇಂದು ಬೆಳಗ್ಗೆ 9.30ಕ್ಕೆ ಬಿಜೆಪಿ ಸಂಸದೀಯ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆದು, ಸಿಎಂ ಹೆಸರು ಅಂತಿಮಗೊಳ್ಳಲಿದೆ. ಆದರೆ, ಬುಧವಾರದ ಶಾಸಕಾಂಗ ಪಕ್ಷದ ಸಭೆಯವರೆಗೂ ಆ ಹೆಸರು ಗೌಪ್ಯವಾಗಿಯೇ ಇರಲಿದೆ.

- Advertisement -

Related news

error: Content is protected !!