
ಹೊಸದಿಲ್ಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಅಪರಾಧಗಳ ಹಿನ್ನೆಲೆ ಹೊಂದಿರದಿದ್ದರೆ, ಅವರ ವಿರುದ್ಧದ ಎಫ್‌ಐಆರ್‌ಗಳನ್ನು ದಿಲ್ಲಿ ಮತ್ತು ಇತರ ರಾಜ್ಯ ಸರಕಾರಗಳು ಹಿಂಪಡೆಯಬಹುದು ಅಥವಾ ರದ್ದುಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ನಿ, ವಿ. ಮೋಹನಾ ಅವರನ್ನೊಳಗೊಂಡ ಪೀಠ, “ಅಪರಾಧ ಹಿನ್ನೆಲೆ” ಎಂಬ ಪದ ಪ್ರಯೋಗ ಕೇವಲ ಗಂಭೀರ ಮತ್ತು ಘೋರ ಅಪರಾಧಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.ವಿಚಾರಣೆಯ ಆರಂಭದಲ್ಲೇ ಸಾಲಿಸಿಟರ್ ಜನರಲ್ ತುಷಾರ್ ಮೆಹ್ರಾ ಅವರು, ಅಪರಾಧದ ಹಿನ್ನೆಲೆ ಹೊಂದಿರುವವರನ್ನು ಹೊರತುಪಡಿಸಿ, ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧದ ಎಫ್‌ಐಆರ್‌ಗಳನ್ನು ಹಿಂಪಡೆಯುವ ಕುರಿತು ಕೇಂದ್ರ ಸರಕಾರ ಬದ್ಧತೆ ಹೊಂದಿದೆ ಎಂದು ಪೀಠಕ್ಕೆ ತಿಳಿಸಿದರು.
ಗಂಭೀರ ಮತ್ತು ಘೋರ ಅಪರಾಧಗಳ ಹಿನ್ನೆಲೆ ಹೊಂದಿರುವ 2,700ಕ್ಕೂ ಅಧಿಕ ಜನರ ಮೇಲಿನ ಎಫ್‌ಐಆರ್‌ಗಳನ್ನು ಹಿಂಪಡೆಯಲಾಗುವುದಿಲ್ಲ ಎಂದು ಮೆಹ್ರಾ ಹೇಳಿದರು.ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು, ಪ್ರತಿಭಟನೆಯ ಸಂದರ್ಭ ನ್ಯಾಯವಾದಿಗಳ ಮಕ್ಕಳ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.”ನಾವು ನ್ಯಾಯಾಲಯಕ್ಕೆ ನೀಡಿರುವ 300 ವೀಡಿಯೊಗಳು ಆಘಾತಕಾರಿಯಾಗಿವೆ. ಈಗ ಸುಪ್ರೀಂ ಕೋರ್ಟ್ ಸ್ವತಃ ಈ ಬಗ್ಗೆ ಸೂಚನೆ ನೀಡಿರುವುದರಿಂದ, ಪೊಲೀಸ್ ಕಮಿಷನರ್ ಅವರು ಈ ವಿಡಿಯೋಗಳನ್ನು ನೋಡಿ, ಪೊಲೀಸರ ತಪ್ಪುಗಳನ್ನು ಪರಿಶೀಲಿಸಬೇಕು” ಎಂದು ಅವರು ಹೇಳಿದರು.
“ದೌರ್ಜನ್ಯ ಎಸಗಿದವರಲ್ಲಿ ಪೊಲೀಸರೊಂದಿಗೆ ಇದ್ದ ಸಮವಸ್ತ್ರ ಧರಿಸಿದ ವ್ಯಕ್ತಿಗಳನ್ನು ನಾವು ಗುರುತಿಸಿದ್ದೇವೆ. ಪೊಲೀಸರು ಪ್ರತಿಭಟನಕಾರರ ಮೇಲೆ ಪೆಲೆಟ್ ಗನ್‌ಗಳನ್ನು ಯಾಕೆ ಬಳಸಿದರು ಎಂಬ ಬಗ್ಗೆ ಸುಪ್ರೀಂ ಕೋರ್ಟ್ ಪೊಲೀಸ್ ಆಯುಕ್ತರು ಹಾಗೂ ಆರ್‌ಎಎಫ್ ನಿರ್ದೇಶಕರ ವಿವರಣೆ ಕೇಳಬೇಕಾಗಿದೆ” ಎಂದು ಅವರು ಹೇಳಿದರು.ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಲಾಗಿದೆ.








