Wednesday, July 22, 2026
spot_imgspot_img
spot_imgspot_img

ಕಾಸರಗೋಡು: ವೃದ್ಧೆಯ ಕೊಲೆ ಮಾಡಿ ಚಿನ್ನದ ಸರ ಕಳವು – ಆರೋಪಿ ಬಂಧನ

- Advertisement -
- Advertisement -

ಕಾಸರಗೋಡು: 72 ವರ್ಷದ ವೃದ್ಧೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನದ ಕರಿಮಣಿ ಸರ ಕಳವು ಮಾಡಿದ್ದ ಪ್ರಕರಣವನ್ನು ಕುಂಬಳೆ ಪೊಲೀಸರು ಭೇದಿಸಿದ್ದು, ಬದಿಯಡ್ಕ ಪೆರ್ಡಾಲ ನಿವಾಸಿ ರಮೇಶ್ ನಾಯಕ್ (47) ಎಂಬಾತನನ್ನು ಬಂಧಿಸಿದ್ದಾರೆ.


ಕುಂಬಾಜೆ ಪಂಚಾಯತ್ ವ್ಯಾಪ್ತಿಯ ಮೊನ್ಸಾರ್ ಗ್ರಾಮದ ಅಜಿಲದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ಪುಷ್ಪಲತಾ ಶೆಟ್ಟಿ ಅವರು ಬುಧವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆರಂಭದಲ್ಲಿ ಸಹಜ ಸಾವು ಎಂದು ಭಾವಿಸಲಾಗಿದ್ದರೂ, ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟ ಬಳಿಕ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು.


ತನಿಖೆಯ ವೇಳೆ ಘಟನೆ ಸಮಯದಲ್ಲಿ ಸ್ಥಳದಲ್ಲೇ ಹುಲ್ಲು ಕತ್ತರಿಸುವ ಕೆಲಸ ಮಾಡುತ್ತಿದ್ದ ರಮೇಶ್ ನಾಯಕ್ ಮೇಲೆ ಅನುಮಾನ ವ್ಯಕ್ತವಾಯಿತು. ವಿಚಾರಣೆ ವೇಳೆ ಆತನ ದೇಹದ ಮೇಲೆ ಗಾಯಗಳಿರುವುದು ಕಂಡುಬಂದಿದ್ದು, ಕಾಳುಮೆಣಸು ಕೀಳುವಾಗ ಗಾಯಗಳಾಗಿವೆ ಎಂದು ಸುಳ್ಳು ಹೇಳಿದ್ದಾನೆ. ಆದರೆ ಕಠಿಣ ವಿಚಾರಣೆಯಲ್ಲಿ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಮನೆ ನಿರ್ಮಾಣಕ್ಕಾಗಿ ಭೂಮಿ ಖರೀದಿಸಿ ಸುಮಾರು 8 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಆರೋಪಿ, ಹಣದ ಅವಶ್ಯಕತೆಯಿಂದ ಪುಷ್ಪಲತಾ ಶೆಟ್ಟಿ ಧರಿಸಿದ್ದ 28 ಗ್ರಾಂ ತೂಕದ ಚಿನ್ನದ ಕರಿಮಣಿ ಸರ ಕಳವು ಮಾಡಲು ಸಂಚು ರೂಪಿಸಿದ್ದ. ಕಳವಿನ ವೇಳೆ ವೃದ್ಧೆ ಪ್ರತಿರೋಧ ಒಡ್ಡಿದಾಗ ಕತ್ತು ಹಿಸುಕಿ ಕೊಲೆ ಮಾಡಿ ಸರದೊಂದಿಗೆ ಪರಾರಿಯಾಗಿದ್ದ.


ಪೊಲೀಸರು ಆರೋಪಿಯಿಂದ ಕಳವು ಮಾಡಲಾದ ಕರಿಮಣಿ ಸರವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

- Advertisement -

Related news

error: Content is protected !!