


ಕಾಸರಗೋಡು: ಮೊಬೈಲ್ ಫೋನ್ ಡಿಸ್ಪ್ಲೇ ರಿಪೇರಿ ಮಾಡಿ ಕೊಟ್ಟಿಲ್ಲವೆಂಬ ಎಂದು ಮನನೊಂದು ಹುಡುಗಿಯೋರ್ವಳು ಇಲಿಗಿಡುವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡಿನ ಕಳತ್ತೂರಿನಲ್ಲಿ ನಡೆದಿದೆ. ಕಳತ್ತೂರು ಕಿದೂರಿನ ಎಂ. ಡಿ. ಪೂಜಾ(17) ಮೃತ ಯುವತಿ.
ಈಕೆ ಮಂಗಳೂರಿನ ಕಾಲೇಜೊಂದರ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಇತ್ತೀಚೆಗೆ ಹಳದಿ ಕಾಮಾಲೆ ಬಾಧಿಸಿ ದೀರ್ಘಕಾಲ ಚಿಕಿತ್ಸೆಯಲ್ಲಿದ್ದ ಕಾರಣ ಈಕೆಯ ಶಿಕ್ಷಣ ಮೊಟಕುಗೊಂಡಿತ್ತು. ಮುಂದಿನ ಅಧ್ಯಯನ ವರ್ಷದಿಂದ ಮೊಟಕುಗೊಂಡ ಶಿಕ್ಷಣ ಪುನರಾರಂಭಿಸುವ ಸಿದ್ಧತೆಯಲ್ಲಿದ್ದಳು. ಕೆಲದಿನಗಳಿಂದ ಈಕೆಯ ಮೊಬೈಲ್ ಫೋನ್ ಡಿಸ್ಪ್ಲೇ ಹಾಳಾಗಿತ್ತು.
ಅದನ್ನು ಆಕೆಯ ಬೇಡಿಕೆಯಂತೆ ರಿಪೇರಿ ಮಾಡಿ ಒದಗಿಸಲು ಆರ್ಥಿಕ ತಾಪತ್ರಯ ಕಾರಣದಿಂದ ಮನೆಯವರಿಗೆ ಸಾಧ್ಯವಾಗಿರಲಿಲ್ಲ. ತನ್ನ ಮೊಬೈಲ್ ರಿಪೇರಿ ಮಾಡಿ ಕೊಡದೇ ಇದ್ದರೆ ತಾನು ಇಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡುವುದಾಗಿ ಪೂಜಾ ಈ ಹಿಂದೆ ಕೆಲವು ಬಾರಿ ಮನೆಯವರಿಗೆ ಬೆದರಿಕೆಯನ್ನೂ ಒಡ್ಡಿದ್ದಳು ಎನ್ನಲಾಗಿದೆ.
ಗುರುವಾರ ಸಂಜೆ ಆಕೆ ಮೊಬೈಲ್ ವಿಚಾರದಲ್ಲಿ ಜಗಳವಾಡಿ ತಾನು ಇಲಿ ವಿಷ ಸೇವಿಸಿರುವುದಾಗಿ ಹೇಳಿದ್ದಳು. ಆದರೆ ಈ ಹಿಂದೆಯೂ ಇದೇ ರೀತಿ ಬೆದರಿಕೆ ಹಾಕಿದ್ದರಿಂದ ಮನೆಯವರಿದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಬುಧವಾರ ರಾತ್ರಿ ವೇಳೆ ಪೂಜಾಳ ಪರಿಸ್ಥಿತಿ ಗಂಭೀರವಾದಾಗ ಆತಂಕಗೊಂಡು ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಸಂಜೆ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಿಂದ ತಿಳಿದುಬಂದಿದೆ.








