Tuesday, July 21, 2026
spot_imgspot_img
spot_imgspot_img

ಕಾಪು: ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಕಸಿದು ಯುವಕರು ಪರಾರಿ

- Advertisement -
- Advertisement -

ಕಾಪು: ಶಿರ್ವ ಸಮೀಪದ ಶಂಕರಪುರದಲ್ಲಿ ಬಾಡಿಗೆ ಮನೆ ವಿಚಾರಿಸುವ ನೆಪದಲ್ಲಿ ಬೈಕ್ ನಲ್ಲಿ ಬಂದ ಮೂವರು ಯುವಕರ ತಂಡವೊಂದು ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ನಡೆದಿದೆ. ಶಂಕರಪುರದ ನಿವಾಸಿ ಹೆಲೆನ್ ಡಿಸೋಜಾ(70) ಚಿನ್ನದ ಸರ ಕಳೆದುಕೊಂಡ ವೃದ್ಧ ಮಹಿಳೆ.

ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಯ ಸುಮಾರಿಗೆ ಹೆಲೆನ್ ಅವರು ಮನೆಯಲ್ಲಿದ್ದಾಗ, ಮೋಟಾರ್ ಬೈಕ್ ನಲ್ಲಿ ಬಂದ ಮೂವರು ಯುವಕರು ಅಕ್ಕಪಕ್ಕದಲ್ಲಿ ಬಾಡಿಗೆಗೆ ಮನೆ ಇದೆಯೇ ಎಂದು ವಿಚಾರಿಸಿದ್ದು, ಆರೋಪಿಗಳು ಹತ್ತಿರದ ಮನೆಗಳ ಬಗ್ಗೆ ಮಾಹಿತಿ ಕೇಳಿ, ವೃದ್ಧೆಯ ಮೊಬೈಲ್ ಸಂಖ್ಯೆಯನ್ನು ನೀಡುವಂತೆ ಕೇಳಿದ್ದಾರೆ.

ನಂತರ ಹೆಲೆನ್ ಅವರು ಸಂಖ್ಯೆಯನ್ನು ಬರೆದುಕೊಡುತ್ತಿದ್ದಂತೆ, ಒಬ್ಬ ಯುವಕ ಅವರ ಕುತ್ತಿಗೆಯಲ್ಲಿದ್ದ ಸುಮಾರು ಮೂರು ಪವನ್ ತೂಕದ ಚಿನ್ನದ ಸರವನ್ನು ಕಸಿದು ಕಂಪೌಂಡ್ ಗೋಡೆ ಹಾರಿ ಓಡಿದ್ದಾನೆ. ಕೂಡಲೇ ಇತರ ಇಬ್ಬರು ಸಹಚರರು ಆತನನ್ನು ಸೇರಿಕೊಂಡು ಮೋಟಾರ್ ಸೈಕಲ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!