ಸುಸ್ಥಿರ ಅಭಿವೃದ್ಧಿ ಎಂದರೆ ಮುಂದಿನ ಪೀಳಿಗೆಯು ತಮ್ಮ ಅಗತ್ಯತೆಗಳನ್ನು ಪೂರೈಸಲು ಸಾಧ್ಯವಾಗುವ ಹಾಗೇ ಪ್ರಸ್ತುತದಲ್ಲಿರುವ ಬೇಡಿಕೆಗಳನ್ನು ಈಡೇರಿಸುವುದು. ಅಂತರ್ಗತ ಅಭಿವೃದ್ಧಿ ಎಂದರೆ ಎಲ್ಲರ ಒಳಿತನ್ನು ಗಣನೆಗೆ ತೆಗೆದುಕೊಂಡು ಮಾಡುವ ಅಭಿವೃದ್ಧಿಯಾಗಿದೆ. ಅಜೆಂಡಾ 2030 ಅಂದರೆ ವಿಶೇಷವಾಗಿ ಸಂಸತ್ತಿನ ಕಾಯಿದೆಗಳನ್ನು ಜಗತ್ತಿನಾದ್ಯಂತ ಗುರುತಿಸುವುದಾಗಿದೆ. ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ತಲುಪಲು ಶಾಸಕಾಂಗ ಸಂಸ್ಥೆಗಳು ಹಲವು ರೀತಿಯ ನೀತಿಗಳನ್ನು ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಈಡೇರಿಸುವುದರ ಜೊತೆಗೆ ಕಾನೂನಿನ ಚೌಕ್ಕಟ್ಟುಗಳನ್ನು ಪರಿಷ್ಕರಿಸುವ ಅಗತ್ಯತೆ ಇದೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅವರು ಸೋಮವಾರ (23/09) ನವದೆಹಲಿಯ ಸಂಸತ್ ಭವನದಲ್ಲಿ ಲೋಕ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರ ಅಧ್ಯಕ್ಷತೆ ಯಲ್ಲಿ ನಡೆದ ಕಾಮನ್ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಕಾರ್ಯಕಾರಿ ಸಮಿತಿ ಸಭೆ ಯಲ್ಲಿ ಭಾಗವಹಿಸಿ 10ನೇ ಕಾಮನ್ವೆಲ್ತ್ ಸಂಸದೀಯ ಸಂಘ ಭಾರತ ವಲಯದ ಸಮ್ಮೇಳನ ದಲ್ಲಿ “ಸುಸ್ಥಿರ ಮತ್ತು ಅಂತರ್ಗತ ಅಭಿವೃದ್ಧಿ ಸಾಧಿಸುವಲ್ಲಿ ಶಾಸಕಾಂಗ ಸಂಸ್ಥೆಗಳ ಪಾತ್ರ” ಎಂಬ ವಿಷಯದಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸಿದರು.
ಶಾಸಕರು ಶಾಸನ ಸಭೆಗಳಿಗೆ ಕೆಲವೊಮ್ಮೆ ಬರುವಾಗ ಯುದ್ಧಕ್ಕೆ ಸನ್ನದ್ಧರಾಗಿರುವ ಹಾಗೆ ಬಿಂಬಿಸುತ್ತಾರೆ. ಋಣಾತ್ಮಕ ಭಾವನೆಗಳನ್ನು ತುಂಬಿಕೊಂಡಿರದೆ ಧನಾತ್ಮಕವಾಗಿ ಚಿಂತಿಸಬೇಕಿದೆ. ಇನ್ನೊಬ್ಬರ ಮೇಲೆ ಹೇಗೆ ಪ್ರಹಾರ ಮಾಡುವುದು ಮತ್ತು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಯೋಚಿಸುವುದೂ ಶಾಸನ ಸಭೆಯಲ್ಲಿ ಕಂಡು ಬರುವ ದೃಶ್ಯ. ಆದುದರಿಂದ ಜನಪ್ರತಿನಿಧಿಗಳಿಗೆ ಮನಸ್ಸಿನ ನಿಯಂತ್ರಣಕ್ಕಾಗಿ ತರಬೇತಿ ನೀಡುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟ ಯು.ಟಿ. ಖಾದರ್ ಅವರು ಇದನ್ನು ಜಾರಿಗೊಳಿಸದೇ ಇದ್ದಲ್ಲಿ ನೀತಿ ನಿಯಮಗಳನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲಾಗದು ಎಂದರು.
ಗ್ರಾಮದ ಜನರು ನಗರಕ್ಕೆ ವಲಸೆ ಹೋಗುವುದನ್ನು ನಿಲ್ಲಿಸಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ನಗರದಲ್ಲಿನ ರೀತಿಯಲ್ಲಿ ಗ್ರಾಮಾಭಿವೃದ್ಧಿ ಮಾಡುವ ಕುರಿತು ಚಿಂತಿಸುವುದು ಅತ್ಯಗತ್ಯ ಎಂದು ಹೇಳಿದ ಯು.ಟಿ.ಖಾದರ್ ಯುವ ಜನತೆಯ ನಿರುದ್ಯೋಗ ನಿರ್ಮೂಲನೆ ಎಲ್ಲಾ ಸಮಸ್ಯೆಗೆ ಪರಿಹಾರ ಎಂದರು. ನಮ್ಮದು ಬಹು ಜನಸಂಖ್ಯೆಯಿರುವ ರಾಷ್ಟ್ರ. ಆದುದರಿಂದ ಅಲ್ಪ ಜನಸಂಖ್ಯೆಯಿರುವ ಅಮೇರಿಕಕ್ಕೆ ಹೋಲಿಸುವುದು ಸರಿಯಲ್ಲ ಎಂದು ಸ್ಪೀಕರ್ ಯು.ಟಿ. ಖಾದರ್ ತಮ್ಮ ವಿಷಯ ಮಂಡನೆಯಲ್ಲಿ ಪ್ರಸ್ತಾಪಿಸಿದರು.