



ತಿರುವನಂತಪುರಂ: ಐತಿಹಾಸಿಕ ಕೋಝಿಕ್ಕೋಡ್ ರೈಲು ನಿಲ್ದಾಣದಲ್ಲಿ ಗುರುವಾರ ನವೀಕರಣ ಕಾರ್ಯ ನಡೆಯುತ್ತಿರುವಾಗ ಶತಮಾನಗಳಷ್ಟು ಹಳೆಯದಾದ ಗಡಿಯಾರ ಗೋಪುರ ಕುಸಿದು ಬಿದ್ದಿದ್ದು, ದೊಡ್ಡ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ.
ಕೋಝಿಕ್ಕೋಡ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ರಲ್ಲಿರುವ 137 ವರ್ಷದ ಹಳೆಯ ಗಡಿಯಾರ ಗೋಪುರದ ಇಂದು ಬೆಳಗ್ಗೆ 11:10 ಗಂಟೆಗೆ ಕುಸಿದಿದೆ. ಪರಿಣಾಮ ಹಲವು ರೈಲು ಸೇವೆಗಳ ವೇಳಾಪಟ್ಟಿ ಬದಲಾಗಿದೆ.
ಹಳೆಯ ರಚನೆಯು, ನಿಲ್ದಾಣದ ನವೀಕರಣ ಯೋಜನೆಯ ಭಾಗವಾಗಿ ಪುನರಾಭಿವೃದ್ಧಿ ಕಾರ್ಯ ನಡೆಯುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಹತ್ತಿರದ ರೈಲ್ವೆ ಹಳಿಗೆ ಅಪ್ಪಳಿಸಿತು. ಐಕಾನಿಕ್ ಗಡಿಯಾರ ಗೋಪುರವು ಕುಸಿದು ಬೀಳುವ ಮೊದಲು ಎರಡು ಹೋಳಾಯಿತು. ಅವಶೇಷಗಳು ಮೂರನೇ ರೈಲ್ವೆ ಮಾರ್ಗ ಮತ್ತು ಪ್ಲಾಟ್‌ಫಾರ್ಮ್‌ನ ಕೆಲವು ಭಾಗಗಳ ಮೇಲೆ ಬಿದ್ದಿವೆ.
ಘಟನೆಯ ಸಮಯದಲ್ಲಿ ಮೂರನೇ ಹಳಿಯಲ್ಲಿ ರೈಲು ನಿಂತಿತ್ತು. ಅದೃಷ್ಟವಶಾತ್ ಕುಸಿದ ರಚನೆಯ ಕೆಲವು ಭಾಗಗಳು ನೇರವಾಗಿ ಬೋಗಿಗಳ ಮೇಲೆ ಬಿದ್ದಿಲ್ಲ. ಬದಲಾಗಿ ಪಕ್ಕದಲ್ಲಿ ಬಿದ್ದವು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಸುತ್ತಮುತ್ತ ಯಾವುದೇ ಪ್ರಯಾಣಿಕರು ಇಲ್ಲದ ಸಮಯದಲ್ಲಿ ಈ ಘಟನೆ ಸಂಭವಿಸಿರುವುದರಿಂದ ಭಾರಿ ಅನಾಹುತ ತಪ್ಪಿದೆ ಎಂದಿದ್ದಾರೆ.








