Tuesday, July 21, 2026
spot_imgspot_img
spot_imgspot_img

ಕುಂದಾಪುರ: ಮೀನುಗಾರಿಕಾ ಬೋಟ್ ಮುಳುಗಡೆ; ಮೀನುಗಾರರ ರಕ್ಷಣೆ

- Advertisement -
- Advertisement -

ಕುಂದಾಪುರ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ಕುಂದಾಪುರ ಮತ್ತು ಗಂಗೊಳ್ಳಿ ನಡುವಿನ ಸಮುದ್ರದಲ್ಲಿ ನೀರು ತುಂಬಿ ಮುಳುಗಡೆಯಾಗಿದ್ದು, ಈ ಬೋಟ್‌ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್‌ನ ಮೀನುಗಾರರು ರಕ್ಷಿಸಿದ್ದಾರೆ.

ಬೋಟ್‌ನಲ್ಲಿದ್ದ ಕುಮಟಾ ಮೂಲದ ಪ್ರಕಾಶ್, ರಂಜಿತ್, ರಾಘವೇಂದ್ರ, ರಾಮ ಮತ್ತು ಶ್ರೀನಿವಾಸ ಎಂಬ ಮೀನುಗಾರರನ್ನು ರಕ್ಷಿಸಲಾಗಿದೆ.

ಕೆಮ್ಮಣ್ಣು ನಿವಾಸಿ ನಾಗರಾಜ್ ಪುತ್ರನ್ ಅವರಿಗೆ ಸೇರಿದ ಶ್ರೀ ದುರ್ಗಾಪರಮೇಶ್ವರಿ ಎಂಬ ಹೆಸರಿನ ಬೋಟ್ ಫೆ.23ರ ರಾತ್ರಿ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೊರಟಿತ್ತು. ಫೆ.24ರಂದು ಸಮುದ್ರದಲ್ಲಿ ಯಾವುದೋ ವಸ್ತು ಬೋಟ್‌ನ ಕೆಳಭಾಗಕ್ಕೆ ತಾಗಿದ ಪರಿಣಾಮ, ಇಂಜಿನ್ ಅಡಿ ಭಾಗದಲ್ಲಿ ನೀರು ನುಗ್ಗಲು ಆರಂಭಿಸಿದ್ದರಿಂದ ಇಂಜಿನ್ ಸ್ಥಗಿತಗೊಂಡಿದೆ.

ಕೂಡಲೇ ಮೀನುಗಾರರು ಬೋಟಿನಿಂದ ನೀರನ್ನು ಖಾಲಿ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ತಕ್ಷಣವೇ ಮಲ್ಪೆಯ ಶ್ರೀ ಕೃಷ್ಣ ಬೋಟ್‌ನ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಐವರು ಮೀನುಗಾರರನ್ನು ರಕ್ಷಿಸಿದರು.

ಬಳಿಕ ಶ್ರೀ ಕೃಷ್ಣ ಬೋಟ್ ಮೂಲಕ ಮುಳುಗುತ್ತಿದ್ದ ಬೋಟ್ ಅನ್ನು ಹಗ್ಗದಿಂದ ಕಟ್ಟಿ ಗಂಗೊಳ್ಳಿ ಬಂದರಿನತ್ತ ಸುಮಾರು 8-9 ನಾಟಿಕಲ್ ಮೈಲಿ ಎಳೆದುಕೊಂಡು ಬರುತ್ತಿದ್ದ ಸಂದರ್ಭ, ಸಮುದ್ರದಲ್ಲಿ ಬೀಸುತ್ತಿದ್ದ ಬಲವಾದ ಗಾಳಿ ಮತ್ತು ಅಲೆಗಳ ಆರ್ಭಟಕ್ಕೆ ಹಗ್ಗ ತುಂಡಾಗಿ ಬೋಟ್ ಸಂಪೂರ್ಣ ಮುಳುಗಡೆಯಾಗಿದೆ.

ಈ ಘಟನೆಯಿಂದ ಸುಮಾರು 60 ರಿಂದ 65 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಬೋಟ್ ಮಾಲೀಕ ನಾಗರಾಜ್ ಪುತ್ರನ್ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗಂಗೊಳ್ಳಿ ಕರಾವಳಿ ಭದ್ರತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!