

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸವಾಲು ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ತೀವ್ರ ವಾಗ್ದಾಳಿ ನಡೆಸಿದ್ದು, ಬೀದಿಯಲ್ಲಿ ನಿಂತು ಗದ್ದಲ ಎಬ್ಬಿಸುವ ಬದಲು ಸಂಸತ್ತಿಗೆ ಬಂದು ಮುಖಾಮುಖಿ ಚರ್ಚೆ ನಡೆಸಿ ಎಂದು ರಾಹುಲ್‌ಗೆ ಶಾ ನೇರ ಸವಾಲು ಹಾಕಿದ್ದಾರೆ.
ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, “ನಾನು ರಾಹುಲ್ ಗಾಂಧಿಗೆ ನೇರ ಸವಾಲು ಹಾಕುತ್ತಿದ್ದೇನೆ. ನೀವು ಪ್ರಧಾನಿ ಮೋದಿಯವರ ಜೊತೆ ಚರ್ಚೆಗೆ ಪಂಥಾಹ್ವಾನ ನೀಡುತ್ತಿದ್ದೀರಾ? ನಿಮಗೆ ನಿಜವಾಗಿಯೂ ಚರ್ಚೆ ಬೇಕಿದ್ದರೆ ಪ್ರಧಾನಿ ಮೋದಿಗೆ ಕೇವಲ ಒಂದು ಪತ್ರ ಬರೆಯಿರಿ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ಕುರಿತು ಚರ್ಚಿಸಲು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ನಾವು ಸಿದ್ಧರಿದ್ದೇವೆ. ತಾಕತ್ತಿದ್ದರೆ ಸಂಸತ್ತಿಗೆ ಬಂದು ಚರ್ಚೆ ಮಾಡಿ ಎಂದು ಗುಡುಗಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ನಿಲುವನ್ನು ತರಾಟೆಗೆ ತೆಗೆದುಕೊಂಡ ಅಮಿತ್ ಶಾ, ಹಿಂದಿನ ಚುನಾವಣೆಗಳ ಸೋಲನ್ನು ನೆನಪಿಸಿದರು. 2014ರಲ್ಲಿ ಎಸ್‌ಐಆರ್ ಇತ್ತೇ? ಆಗಲೂ ನೀವು ಸಂಪೂರ್ಣವಾಗಿ ಸೋತಿದ್ದೀರಿ. 2019ರಲ್ಲಿ ಎಸ್‌ಐಆರ್ ಎಲ್ಲಿತ್ತು? ಆಗಲೂ ಸೋತಿರಿ. 2024ರಲ್ಲೂ ಯಾವುದೇ ಎಸ್‌ಐಆರ್ ಇರಲಿಲ್ಲ, ಆದರೂ ನೀವು ಸೋಲುಂಡಿರಿ.
ಹರಿಯಾಣದಲ್ಲಾಗಲಿ, ಮಹಾರಾಷ್ಟ್ರದಲ್ಲಾಗಲಿ ಎಸ್‌ಐಆರ್ ಇರಲಿಲ್ಲ, ಆದರೂ ಎಲ್ಲ ಕಡೆ ಹೀನಾಯವಾಗಿ ಸೋತಿದ್ದೀರಿ. ನೀವು ಸಂಸತ್ತನ್ನು ಸುಸೂತ್ರವಾಗಿ ನಡೆಯಲು ಬಿಡುವುದಿಲ್ಲ. ಬದಲಿಗೆ ಬೀದಿಯಲ್ಲಿ ಜನರನ್ನು ಸೇರಿಸಿ ಅರಾಜಕತೆ ಸೃಷ್ಟಿಸುತ್ತಿದ್ದೀರಿ. ಸಂಸತ್ತಿನಲ್ಲಿ ಗದ್ದಲ ಎಬ್ಬಿಸುವುದು, ಕಲಾಪ ಬಹಿಷ್ಕರಿಸುವುದೇ ನಿಮ್ಮ ಕೆಲಸವಾಗಿದೆ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ ಇದೇ ರೀತಿ ರಸ್ತೆಗಿಳಿದು ಜನರನ್ನು ಸೇರಿಸಿ ಗಲಭೆ ಎಬ್ಬಿಸಲು ಯತ್ನಿಸಿದರೆ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದರು.
ದೇಶದ ಜನರು ಸತತವಾಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ದೇಶದ ಜನತೆ ನಿಮ್ಮೊಂದಿಗಾಗಲಿ ಅಥವಾ ನಿಮ್ಮ ವಿರೋಧ ಪಕ್ಷಗಳ ಮೈತ್ರಿಕೂಟದೊಂದಿಗಾಗಲಿ ಇಲ್ಲ. ಇತ್ತೀಚೆಗೆ ದೆಹಲಿಗೆ ದೇಶಾದ್ಯಂತ 10 ಲಕ್ಷ ಜನರನ್ನು ಸೇರಿಸುವುದಾಗಿ ಕರೆ ನೀಡಿದ್ದಿರಿ. ಆದರೆ ಕೇವಲ 70 ಸಾವಿರ ಸಾಮರ್ಥ್ಯದ ಮೈದಾನವೂ ಅರ್ಧದಷ್ಟು ಖಾಲಿಯಿತ್ತು ಎಂದು ಲೇವಡಿ ಮಾಡಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.








