ಬೆಂಗಳೂರು: ಬೆಂಗಳೂರು ಮಾತ್ರವಲ್ಲದೇ, ಇಡೀ ರಾಜ್ಯಾದ್ಯಂತ ಲಾಕ್ ಡೌನ್ ಮಾಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಒತ್ತಾಯ ಮಾಡಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗೆ ಲಾಕ್ ಡೌನ್ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಆದ್ರೆ ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹಬ್ಬುತ್ತಿದೆ. ಹೀಗಾಗಿ ಇಡೀ ರಾಜ್ಯವನ್ನು ಲಾಕ್ ಡೌನ್ ಮಾಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಮನವಿ:
ಆರೋಗ್ಯ ಕಾಪಾಡಿಕೊಳ್ಳಿ ಎಂದು ಎಚ್ ಡಿಡಿ ಮನವಿ ಮಾಡಿದ್ದಾರೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ, ಅಗತ್ಯ ವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಸ್ಯಾನಿಟೈಸರ್ ನಿಂದ ಕೈಯನ್ನು ಸ್ವಚ್ಛ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ಅವ್ಯವಹಾರದ ಬಗ್ಗೆ ಮುಂದಿನ ಅಧಿವೇಶನದಲ್ಲಿ ಚರ್ಚೆ ಮಾಡಲಿ:
ಕೊರೊನಾ ವೈರಸ್ ಸಂಬಂದ ಸರ್ಕಾರ ಘೋಷಿಸಿರುವ ಪ್ಯಾಕೇಜ್ ನಲ್ಲಿ ಅವ್ಯವಹಾರ ಆರೋಪ ಕೇಳಿಬಂದಿದೆ. ಅದೇನಿದ್ದರೂ ಮುಂದಿನ ಅಧಿವೇಶನಲ್ಲಿ ಚರ್ಚೆ ಮಾಡಲಿ. ಈಗೇನಿದ್ದರು ಜನರ ಆರೋಗ್ಯ ಕಾಳಜಿ ಮುಖ್ಯ ಎಂದು ತಿಳಿಸಿದ್ದಾರೆ. ನಾವೆಲ್ಲ ಸರ್ಕಾರದ ಜತೆಗಿದ್ದೇವೆ. ಜನರ ಜೀವದ ಜತೆ ಚೆಲ್ಲಾಟ ಬೇಡ. ಈ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.