ಲಕ್ನೋ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಉತ್ತರಪ್ರದೇಶ ಹಾಗೂ ಬಿಹಾರದಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿ ಮಾಡಲಾಗಿದೆ. ಉತ್ತರಪ್ರದೇಶದಲ್ಲಿ ಸಂಪೂರ್ಣ ಲಾಕ್ ಡೌನ್ ಆಗಿದ್ದರೆ, ಬಿಹಾರದಲ್ಲಿ ರಾಜಧಾನಿ ಪಾಟ್ನಾ ಮತ್ತು 6 ಜಿಲ್ಲೆಗಳಲ್ಲಿ ಮಾತ್ರ ಲಾಕ್ ಡೌನ್ ಮಾಡಲಾಗಿದೆ.

ಉತ್ತರ ಪ್ರದೇಶದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಎಲ್ಲ ಸರ್ಕಾರಿ , ಖಾಸಗಿ ಕಚೇರಿಗಳನ್ನು ಹಾಗೂ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದೆ. ಮನೆಯಿಂದ ಯಾರೂ ಹೊರಗಡೆ ಬಾರದಂತೆ ಸೂಚನೆ ನೀಡಲಾಗಿದೆ.

ಮತ್ತೊಂದು ಕಡೆ ಬಿಹಾರದಲ್ಲಿ ರಾಜಧಾನಿ ಪಾಟ್ನಾ ಸೇರಿದಂತೆ ಆರು ಜಿಲ್ಲೆಗಳಲ್ಲಿ ಮಾತ್ರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಪಾಟ್ನಾ, ನವಾಡಾ, ಬಕ್ಸಾರ್, ಬಾಗಲ್ಪುರ್, ಕಿಶನ್ ಗಂಜ್ ಮತ್ತು ಪೂರ್ಣಿಯಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿಯಾಗಿದೆ. ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.