Thursday, March 28, 2024
spot_imgspot_img
spot_imgspot_img

ಮೌನದಲ್ಲೇ ಸಾಧನೆ ಸಾಧ್ಯ

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ ದರ್ಬೆ ಪುತ್ತೂರು.

ಬೆಳಿಗ್ಗೆ ಎದ್ದಾಗಲೇ ಮನದೊಳಗೆ ತುಡಿತ ಪ್ರಾರಂಭ. ಅದನ್ನು ಸಮಾಧಾನಿಸಲು ಹೊರಗಿನ ವಾತಾವರಣ ತಿಳಿಯಾಗಬೇಕು. ಅತ್ತ ರಾತ್ರಿಯಿಡೀ ಕರೆಂಟು ಕೈ ಕೊಟ್ಟಿದೆ. ಅರೆಯುವ ಕಲ್ಲು ಇಲ್ಲ. ಬೆಳಗಿನ ತಿಂಡಿಗೆ ಅಕ್ಕಿ ನೆನೆದು ಕಾದಿದೆ.ಯೋಚನೆ ಸಾಗುತ್ತದೆ ಮುಂದೆ ಮುಂದೆ. ಕಾಲ ಸಾಗಿದಂತೆ‌. ದಾರಿಗೆ ಅಂತ್ಯವೆಂಬುದು ಇಲ್ಲದಿರುವಂತೆ ಮುಂದೆ ಸಾಗುತ್ತಿರುತ್ತದೆ ಈ ಜೀವನ ಚಕ್ರ.

ಆಗಲೇ ಇದ್ದಕ್ಕಿದ್ದ ಹಾಗೆ ಕರೆಂಟಿನ ಆಗಮನ, ಬೆಳಗಿನ ಅತಿಥಿ ಬಂದ ಹಾಗೆ. ಹಾಗಾಗಿ ಎಲ್ಲದಕ್ಕೂ ತರಾತುರಿ. ನೆನೆಸಿದ ಅಕ್ಕಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಬೇಕು. ಟಾರ್ಚ್, ಮೊಬೈಲ್ ಗಳನ್ನು ಚಾರ್ಜ್ ಮಾಡಲು ಇಡಬೇಕು. ಆಯಿತು, ಜಟ್ ಪಟ್ ಇಟ್ಟಿರಿ. ಮುಂದೆ ಅಕ್ಕಿ ತೊಳೆದು ಜಾರ್ ಗೆ ಹಾಕಿ ಸ್ವಿಚ್ ಹಾಕಿದಿರಿ ,ಚಾಲೂ ಆಗ್ತಿಲ್ಲ. ಏನಪ್ಪಾ ಇದು ಹೀಗೆ? ಅಂತ ನೋಡಿದರೆ ಕರೆಂಟು ಬಂದ ದಾರಿಗೆ ಸುಂಕವಿಲ್ಲ ಅಂತ ವಾಪಾಸಾಗಿದೆ!.

ಈಗೀಗ ಜೋರು ಮಳೆರಾಯ ಬರ್ತಿದ್ದಾನೆ. ಅವನಿಗೂ ಈ ಜನಗಳ ಶಾಪ , ನಿಂದನೆ ಕೇಳಿ ಸಾಕಾಗಿ ಹೋಗಿತ್ತೋ ಏನೋ, ಬಂದವನಿಗೆ ಹೇಗೆ ಬರಬೇಕು , ಎಲ್ಲಿ ನಿಲ್ಲಿಸಬೇಕು, ಎಷ್ಟು, ಏನು ಕತೆ , ಒಂದೂ ತಿಳಿಯದ ಮಗುವಿನಂತೆ ಆಗಿದ್ದಾನೆ.!! ನರ ಮನುಷ್ಯರ ಎಲುಬಿಲ್ಲದ ನಾಲಿಗೆ ನೋಡಿ, ಏನೇನೋ ಅಂದುಬಿಡುತ್ತಾರೆ, ಜಾರುವ ಸ್ಥಳದಲ್ಲಿರುವುದರಿಂದ ಹೆಚ್ಚು ಅಪಾಯವೂ ಇರುತ್ತದೆ. ಆಡಿದ ನಂತರ ಅಲವತ್ತು ಕೊಳ್ಳುತ್ತಾರೆ.

ಹಿಂದಿನ ಕಾಲದಲ್ಲಿ ಮನೆಯಲ್ಲಿ ಹಿರಿಯರು ಹೇಳಿದ ಮಾತು, ಅದು ಸರಿ ಇರಲಿ ಇಲ್ಲದಿರಲಿ ಅದೇ ವೇದವಾಕ್ಯವಾಗಿತ್ತು. ಅದೇ ರೀತಿಯಲ್ಲಿ ಆ ಮನೆಯೊಳಗಿನ ಮಂದಿ ಇರಲೇಬೇಕಿತ್ತು. ಎರಡನೇ ಅವಕಾಶವಿರಲೇ ಇಲ್ಲ. ಆದರೆ ಈಗ ಮಂದಿ ಇರೋದು ಮೂರು ತಪ್ಪಿದ್ರೆ ನಾಲ್ಕು. ಹಾಗೂ ಎಲ್ಲರ ಮಾತುಗಳೂ ಉತ್ಕೃಷ್ಟ!. ಬಿಡುವ ಮಾತು ಇಲ್ಲವೇ ಇಲ್ಲ. ಕೊನೆಗೆ ಕಿರಿಯರು ಹೇಳಿದ ಮಾತೇ ನಡೆದುಹೋಗುವುದು !! ಅನ್ನೋ ಹಾಗೂ ಇಲ್ಲ, ನುಂಗುವ ಹಾಗೂ ಇಲ್ಲ. ಬಿಸಿ ತುಪ್ಪದಂತೆ – ಉಗುಳಿದರೆ ಛೇ ಹಾಳಾಯಿತಲ್ಲಾ ಎಂದು, ನುಂಗಿದಿರೋ ಗಂಟಲು ಸುಟ್ಟು ಹೋಗುವುದು. ಇಂದಿನ ಸ್ಥಿತಿ ಹಾಗೆಯೇ ಸಾಗುತ್ತಿದೆ.

ಬದುಕಿಗೆ ನಾವೆಣಿಸಿದಂತೆ ಭರವಸೆಗಳನ್ನು ತುಂಬಬಹುದು. ಆದರೆ ಆಗುವಂತಹ ಕಾರ್ಯಗಳು ಕಾಲಕ್ಕೆ ತಕ್ಕಂತೆ ಅಗುತ್ತಾ ಇರುತ್ತದೆ,ಆಗಿಯೇ ಹೋಗುತ್ತದೆ. ನಾವು ನಿಮಿತ್ತ ಮಾತ್ರ. ದನದ ಹಿಂದೆ ಕರುವು ಹೋದ ಹಾಗೆ. ಆದರೆ ಈಗಿನ ಕಾಲ ಹಾಗಲ್ಲ. ತಿರುವು ಮುರುವಾಗಿದೆ. ಕರುವಿನ ಹಿಂದೆ ದನ ಹೋಗ್ಬೇಕಾಗಿದೆ. ಈಗಿನ ವಿದ್ಯಾಭ್ಯಾಸದ ಹಂತವೂ ಅದೇ ಹಾದಿಯನ್ನು ಹಿಡಿಯುತ್ತಿದೆ.

ಅದೇನೇ ಇರಲಿ, ಎಲ್ಲಕ್ಕಿಂತ ಮುಖ್ಯ ನಮ್ಮೊಳಗಿನ ಆಂತರಾತ್ಮನಲ್ಲಿ ಒಂದೆರಡು ತಾಸು ಮೌನವಾಗಿ ಕುಳಿತು ಮಾತನಾಡುವುದೊಳಿತು. ಹೊರಗಡೆಯಿರುವ ವಸ್ತುಗಳು ಈಗೆಲ್ಲವೂ ದುಬಾರಿ. ಕಾರಣ ಎಲ್ಲವೂ ಕೊಡು ಕೊಳ್ಳುವಿಕೆಯದ್ದೇ ಆಗಿರುತ್ತವೆ. ನಮ್ಮೊಳಗಿನ ಅಂತರಂಗವನ್ನು ಗಮನಿಸುವುದೇ ಇಲ್ಲ.ಬರೀ ಬಾಹ್ಯವನ್ನು ಮಾತ್ರ ಗಮನಿಸಿದರೆ ಸಾಲದು. ಹಲ್ಲು ತೊಳೆಯುವುದು, ಮುಖ ಶುಚಿಯಾಗಿಡುವುದು, ಸ್ನಾನ ಮಾಡುವುದು, ತಲೆಗೂದಲು ಒಪ್ಪವಾಗಿರಿಸಿ ಕೊಳ್ಳುವುದು, ಉಗುರು ತೆಗೆಯುವುದು ಮುಂತಾದವುಗಳ ಜೊತೆಗೆ ಮನದಾಳದೊಳಗೆ ಇಳಿದು ಒಂದರ್ಧ ಗಂಟೆಯಾದರೂ ದೇಹದೊಳಗಿನ ಎಲ್ಲಾ ಭಾಗಗಳಿಗೂ ಗಮನ ಕೊಡಬೇಕು. ಆಗಲೇ ಮನಸ್ಸಿಗೆ ವಿಶ್ರಾಂತಿ ಲಭ್ಯವಾಗುತ್ತದೆ. ಬರಿಯ ನಿದ್ರೆಯಿಂದ ಮಾತ್ರ ವಿಶ್ರಾಂತಿ ದೊರಕುವುದಲ್ಲ.ಅಂತರಂಗದ ಧ್ಯಾನದಲ್ಲೂ ವಿಶ್ರಾಂತಿ ಸಿಗುತ್ತದೆ. ಹಾಗೂ ಮನಸ್ಸಿಗೆ ಆಯಾಸ ಪರಿಹರಿಸಿಕೊಳ್ಳುವ ಸೂಕ್ತ ಮಾರ್ಗವೂ ಹೌದು.

ದೇಹಕ್ಕೆ ಮಾತ್ರ ಆಯಾಸವೆಂಬುದು ಸರಿಯಲ್ಲ. ಮನಸ್ಸಿಗೂ ಯೋಚನೆ ಮಾಡಿ, ಯೋಜನೆ ಕಾರ್ಯಗತಗೊಳಿಸಲು ಧ್ಯಾನದಿಂದ ಸಾಧ್ಯವಾಗುವ ಸಂಭವನೀಯತೆ ಹೆಚ್ಚು. ಆದರೆ ಅದನ್ನೇ ಮಾಡಲು ಪುರುಸೊತ್ತು ಎಂಬುದು ಸಿಗದಾಗಿದೆ. ಪುರುಸೊತ್ತು ಈಗ ಪರಸೊತ್ತು ಆಗಿದೆಯೆಂದು ಹೇಳಬಹುದೋ ಏನೋ!? . ಹಾಗಾದಾಗ ಮತ್ತೆ ದೇಹವೇ ವಿಶ್ರಾಂತಿ ತಗೊಳ್ತಾ ನಮ್ಮನ್ನು ಜಡತ್ವದೆಡೆಗೆ ತಳ್ಳಲೂಬಹುದು.

ಬೇರೆಯವರ ಮೇಲಿನ ಕೋಪವನ್ನು ನಮ್ಮ ಮನಸ್ಸಿಗೆ ಹೇರಬಾರದು. ಕೆಲವರು ಸಿಟ್ಟನ್ನು ತಮ್ಮ ದೇಹದ ಮೇಲೆ ತೀರಿಸಿಕೊಳ್ಳುತ್ತಾರೆ. ಇದು ಸರಿಯಲ್ಲ. ಕೋಪದಿಂದ ಮಾಡುವ ಅನಾಹುತ ಕೆಲವೊಮ್ಮೆ ದುರಂತವನ್ನೇ ತಂದಿರಿಸುತ್ತದೆ. ಅದೇ ಹೇಳ್ತಾರಲ್ಲ “ಕೋಪದಿಂದ ಕೊಯ್ದ ಮೂಗು ಶಮನವಾದಾಗ ಹಿಂದಕ್ಕೆ ಬರಲುಂಟೆ”- ಹೀಗಾಗಿ ಆದಷ್ಟೂ ಮೌನವಾಗಿ ಕೋಪವನ್ನು ತಡೆಯಬಹುದೋ ಏನೋ .ತಪಸ್ಸು ಮಾಡಲು ಹಿಮಾಲಯ ಪರ್ವತಕ್ಕೆ ಹೋಗುವ ಸಮಯವೂ ಇದಲ್ಲ.

ಕೋಪ ಬಂದಾಗ ಕೋದಂಡ ಪಾಣಿಯನ್ನ ನೆನೆದು ಶಮನವಾಗುವುದಿದ್ದರೆ ಎಷ್ಟು ಒಳ್ಳೆಯದಿತ್ತೆಂದು ಅನಿಸದೆ ಇರದು. ನಾವು ಪಕ್ಕದ ಮನೆ ಕಡೆ ಕಣ್ಣು ಹಾಯಿಸುವುದು ಬಿಟ್ಟಾಗ ಅರ್ಧ ಕೋಪ ಇಳಿದ ಹಾಗೆ! ಅದೂ ಇದೂ ಮಾತನಾಡಿ ಅವರ ಬಳಿಯ ಸೌಲಭ್ಯಗಳು ನಮ್ಮಲ್ಲಿ ಅಲಭ್ಯವಿದ್ದಾಗ ನಮ್ಮ ಮನಸ್ಸು ಅನ್ಯ ಚಿಂತೆ ಮಾಡುವುದರಲ್ಲಿಯೇ ಕಾಲಹರಣ ಮಾಡುತ್ತದೆ. ಇದು ಮಾನಸಿಕ ಅಶಾಂತಿಯನ್ನು ಹೆಚ್ಚಿಸುತ್ತದೆ.

“ಎಲ್ಲರ ಮನೆ ದೋಸೆ ತೂತು” ಗಾದೆಯ ಗುಣ ಅರಿತಾಗ ಕೋಪ ಬಿಟ್ಟು ತಾಳ್ಮೆ ಬಂದರೂ ಬರಬಹುದು. ಬುದ್ಧಿ ಹೇಳಲು ಬರುವಾಗ ಎಲ್ಲರೂ ಸಂಭಾವಿತರೇ. ಆಡಿದ ಒಂದು ಮಾತು ಹೆಚ್ಚಾಯಿತೋ ಅಲ್ಲೇ ರಕ್ತ ಬೀಜಾಸುರನ ರಕ್ತ ನೆಲಕ್ಕೆ ಬಿದ್ದು ಮತ್ತೊಬ್ಬ ರಕ್ತ ಬೀಜಾಸುರ ಎದ್ದಂತೆ. ಅಪಾಯಕ್ಕೆ ಆಹ್ವಾನ ಬೇಕೆಂದೇನೂ ಇಲ್ಲ.. ಹಾಗಾಗಿ ಇಂದಿನ ಈ ಜಗತ್ತಿನಲ್ಲಿ ಸಹನೆ, ತಾಳ್ಮೆ, ಸಮಾಧಾನ, ಕ್ಷಮೆ ಎನ್ನುವ ಪದಗಳು ಆಡುಭಾಷೆಯಾಗಿ ಬಳಸಲು ಯೋಗ್ಯವೇ ಹೊರತು ಕಾರ್ಯಗಳಲ್ಲಿ ಏನೂ ಪ್ರಯೋಜನವಿಲ್ಲ ಎಂಬಂತೆ ಆಗಿದೆ.

ಬೆಳಗಿನ ಹೊತ್ತು ಮಾಡುವ ಕಾರ್ಯಗಳು ದೇಹಕ್ಕೆ ಸ್ವಲ್ಪವಾದರೂ ಶ್ರಮ ನೀಡಬೇಕು. ಆಗಲೇ ದೇಹದೊಳಗಿರತಕ್ಕ ಕಲ್ಮಶಗಳನ್ನು ಚರ್ಮವು ಬೆವರಿನ ರೂಪದಲ್ಲಿ ಹೊರಹಾಕುತ್ತದೆ. ಆಗ ದೇಹವು ಹಗುರವಾದಂತೆ ಭಾಸವಾಗುತ್ತದೆ. ಅದು ಬಿಟ್ಟು ಬೆವರೇ ಇಳಿಯದಿದ್ದರೆ ಹೇಗೆ? ಕುಳಿತು ಮಾಡುವ ಕೆಲಸವಿದ್ದರಂತೂ ನಡಿಗೆ ಅಥವಾ ಓಡುನಡಿಗೆ ಅತ್ಯವಶ್ಯವಾಗಿದೆ. ಹಿಂದಿನ ಕಾಲದಲ್ಲಿ ಬಿಡುವಿಲ್ಲದ ಶ್ರಮಭರಿತ ಕಾರ್ಯಗಳೇ ದೇಹಕ್ಕೆ ಸಾಕಷ್ಟು ವ್ಯಾಯಾಮ ನೀಡುತ್ತಿತ್ತು.

ಈಗಲೂ ಕಾಲ ಮಿಂಚಿಲ್ಲ. ಅವರವರ ಕೆಲಸ ಅವರವರೇ ಮಾಡಿದರೆ ಆಯಿತು. ಕೈಕಾಲುಗಳ ಉಪಯೋಗವಾದರೆ ತಾನೇ ಹೆಚ್ಚು ಬಾಳಿಕೆ ಬರುವುದು? ಉಪಯೋಗವಿಲ್ಲದ ಯಾವುದೇ ವಸ್ತುಗಳು ಹೆಚ್ಚುಕಾಲ ಬಾಳಿಕೆ ಬರಲಾರವು. ಬಂದರೂ ಕ್ರಮೇಣ ಮೂಲೆ ಸೇರುವ ಸಂದರ್ಭವೇ ಹೆಚ್ಚು. ಹಾಗಾಗಿ ಮನಸ್ಸನ್ನು ಎಂದಿಗೂ ಮೂಲೆಗುಂಪಾಗಿಸದಿರೋಣ . ಮೌನದಿಂದಲೇ ಸಾಧನಾಪಥದಲ್ಲಿ ಮುಂದುವರಿಯೋಣ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ ದರ್ಬೆ ಪುತ್ತೂರು.
ಅಂಕಣಕಾರರು
[email protected]

- Advertisement -

Related news

error: Content is protected !!