Thursday, April 25, 2024
spot_imgspot_img
spot_imgspot_img

ಒಳಿತಿನ ದಾರಿಯಲ್ಲಿ ಸಾಗೋಣ

- Advertisement -G L Acharya panikkar
- Advertisement -

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು. ಅಂಕಣಕಾರರು ,ಕವಯಿತ್ರಿ.

ದುಕಿನಲ್ಲಿ ಎಲ್ಲವೂ ನಾವೆಣಿಸಿದಂತೆ ನಡೆದರೆ ಎಷ್ಟು ಸುಂದರವಲ್ಲವೇ? ಆದರೆ ಹಾಗಾಗುವುದು ಸಾಧ್ಯವೇ ಇಲ್ಲ. ನಮ್ಮನ್ನು ಕಾಯುವವ ನಮ್ಮೆಲ್ಲ ಆಗುಹೋಗುಗಳನ್ನು ತಪ್ಪದೇ ಗಮನಿಸುತ್ತಿರುತ್ತಾನೆ. ಮನದ ಮೂಲೆಯಲ್ಲಿ ಅಹಂ ನ ಕಿಡಿ ಅಥವಾ ಗೆಲುವಿನ ನಗೆ ಸ್ವಲ್ಪವಾಗಿ ಕಾಣಿಸಿತೋ ಅದನ್ನು ಕ್ಷಣಾರ್ಧದಲ್ಲಿ ಪರಿವರ್ತಿಸಿಬಿಡುತ್ತಾನೆ. ಒಂದು ವೇಳೆ ಸೋತು, ಕಂಗಾಲಾಗಿ ಇನ್ನೇನು ಈ ಬದುಕೇ ಬೇಡ ಎಂದು ತೀರ್ಮಾನಿಸುವಷ್ಟರಲ್ಲಿ ಗೆಲುವಿನ ಕ್ಷಣಗಳನ್ನು ತಂದಿರಿಸುತ್ತಾನೆ. ಹೀಗೆ ನಮ್ಮ ಬದುಕೆಂಬುದು ಕತ್ತಿಯ ಅಲಗಿನ ಮೇಲೆ ನಿಂತ ಪರಿಸ್ಥಿತಿ, ಯಾವಾಗ ತಾಗುವುದೋ ಎಂಬ ಹೆದರಿಕೆಯಿಂದಿರಿಸುತ್ತದೆ.

ಹಾಗಾಗಿ ಬದುಕು ಎಂಬುದು ಒಂದು ನಿರಂತರವಾದ ಹೋರಾಟವೇ ಸರಿ. ಒಂದು ಸೊಳ್ಳೆಯೋ ಅಥವಾ ಇರುವೆಯೋ ಕಚ್ಚಲು ಬರುವುದಾದರೆ ನಾವು ಸದಾ ಹೇಗೆ ಜಾಗೃತ ವಿರುತ್ತೇವೆಯೋ ಅಥವಾ ಕಚ್ಚದಂತೆ ಹೇಗೆ ತಪ್ಪಿಸಿಕೊಳ್ಳುತ್ತೇವೆಯೋ ಹಾಗೆಯೇ ನಮ್ಮ ಒಳಗಿನ ಶತ್ರುಗಳನ್ನು ಕೂಡ ನಾವು ಸದಾ ತಪ್ಪಿಸಿಕೊಳ್ಳುತ್ತಲೇ ಇರಬೇಕು. ಒಳಿತನ್ನು ನಿರಂತರ ಗುರುತಿಸುತ್ತಾ ಬದುಕು ಸಾಗಿಸಬೇಕು.ಯಾವುದು ಕೂಡಾ ಇತಿಮಿತಿಯಲ್ಲಿದ್ದರೆ ಒಳಿತು.ಅಧಿಕವಾದರೆ ಎಲ್ಲವೂ ಅಪಥ್ಯವಾಗುವುದು.

‘ನಿಂದಕರಿರಬೇಕು’ ಕೆಲವರಿರುತ್ತಾರೆ, ಎದುರಿರುವಾಗ ಹೊಗಳುತ್ತ, ಬೆನ್ನು ಹಾಕಿದೊಡನೆ ತೆಗಳುವ ಮಂದಿಯಿರುತ್ತಾರೆ. ಆಗ ಸುಮ್ಮನಿದ್ದುಬಿಡುವುದೇ ಕ್ಷೇಮ.ಅದೇ ಅಲ್ವ ಹಂಡೆಯ ಬಾಯಿಯನ್ನು ಬಿಗಿದು ಹಗ್ಗದಿಂದ ಗಟ್ಟಿಯಾಗಿ ಕಟ್ಟಿ ಮುಚ್ಚಬಹುದು, ದೊಂಡೆ (ಬಾಯಿ)ಯನ್ನು ಬಿಗಿದು ಗಟ್ಟಿಯಾಗಿ ಕಟ್ಟಲು ಸಾಧ್ಯವೇ ಇಲ್ಲ. ನೀರು ಹೇಗೆ ನದಿಯ ಪಾತ್ರೆಯೊಂದಿಗೆ ಹೊಂದಿಕೊಳ್ಳುತ್ತ ಹರಿದು ಸಾಗುವುದೋ ಹಾಗೆಯೇ ಈ ಭೂಮಿಯಲ್ಲಿ ಮನುಜರು (ಇತರ ಹೊಗಳಿಕೆ ತೆಗಳಿಕೆಗಳೆಂಬ) ನದಿಯೊಂದಿಗೆ ನೀರು ಸಾಗಿದಂತೆ ಸಾಗುತ್ತಿರಬೇಕು.
ನದಿಯ ನೀರನ್ನು ನಾನಾ ವಿಧದಲ್ಲಿ ಉಪಯೋಗ ಮಾಡಲಾಗುತ್ತದೆ.

ಹಾಗೆಯೇ ಬದುಕಿನಲ್ಲಿ ಹಲವು ರೀತಿಯ ಅವಕಾಶಗಳು ಬಂದಾಗ ಅವನ್ನು ಸದುದ್ದೇಶದಿಂದ ಉಪಯೋಗಿಸಿಕೊಳ್ಳಬೇಕು. ಆಗ ಬದುಕಿಗೆ ಹೆಚ್ಚು ಅಂತಃಸತ್ವ ದೊರಕಲ್ಪಡುತ್ತದೆ. ಸುಮ್ಮನೇ ನೀರು ಹರಿದು ಹೋಗುತ್ತಿದ್ದರೆ ಸಾಗರಕ್ಕೆ ಸೇರಿ ವ್ಯರ್ಥವಾದಂತೆ !,ಈ ಬದುಕನ್ನು ಸದುಪಯೋಗಗೊಳಿಸಿಕೊಳ್ಳದೇ ಹೋದರೆ, ದಿನ ದೂಡಿದಂತೆ ಭೂಮಿಗೆ ಭಾರವಾಗಿ ಬದುಕಿ ಕೊನೆಗೆ ಪಶ್ಚಾತ್ತಾಪ ಪಡುವಂತಾಗುತ್ತದೆ.ಅದಕ್ಕಾಗಿ ಈ ದಿನವೇ ಸುದಿನ ಎಂಬುದನ್ನರಿತು ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಮನಸ್ಸನ್ನು ಒಳಿತಿನ ದಾರಿಯಲ್ಲಿ ಮುಂದುವರಿಸುತ್ತ ಪ್ರಯತ್ನಿಸೋಣ.

ಬದುಕಿಗೆ ನಿರಂತರ ವು ಕಾಲದ ಮಿತಿಯರಿತು ಸಪ್ರೇಮದಿಂದ ಸುಂದರತೆಗೆ ಕಾಪಿಡೋಣ. ಅಕ್ಷರ ಸುಂದರವಾಗಲು ಮಗು ಹೇಗೆ ಶ್ರಮಪಡುವುದೋ ಮನಸ್ಸು ಸುಂದರವಾಗಲು ಅಷ್ಟೇ ಶ್ರಮ ಪಡಬೇಕು. ಚಿಕ್ಕ ಮಕ್ಕಳಿಗೆ ಮುದ್ದಾಗಿ ಬರೆಯಲು ನಾವು ಅವರ ಕೈಯೊಂದಿಗೆ ನಮ್ಮ ಕೈ ಜೊತೆ ಸೇರಿಸಿ ಬರೆಯುವಂತೆ, ಮನಸ್ಸನ್ನು ದೇವರ ನಾಮಸ್ಮರಣೆಯೊಂದಿಗೆ ಜೊತೆಗೂಡಿಸೋಣ. ಬದುಕಿಗೆ ಆಧ್ಯಾತ್ಮದ ದೀವಿಗೆ ಹಚ್ಚೋಣ.

ಮಲ್ಲಿಕಾ ಜೆ ರೈ ಗುಂಡ್ಯಡ್ಕ ಪುತ್ತೂರು. ಅಂಕಣಕಾರರು ,ಕವಯಿತ್ರಿ.
[email protected]

- Advertisement -

Related news

error: Content is protected !!