Monday, July 20, 2026
spot_imgspot_img
spot_imgspot_img

ಬೆಂಗಳೂರು: ಪರೀಕ್ಷಾ ಭಯದಿಂದ ಮನೆಬಿಟ್ಟು ಹೋದ ವಿದ್ಯಾರ್ಥಿನಿಯರು!

- Advertisement -
- Advertisement -

ಬೆಂಗಳೂರು: ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿರುವ ಘಟನೆ ಬೆಂಗಳೂರು ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜ.31ರಂದು ದ್ವಿತೀಯ ಪಿಯುಸಿ ತನಿಷ್ಕಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿ ತೇಜಸ್ವಿನಿ ಕಾಣೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪರೀಕ್ಷೆ ಸಮೀಪಿಸುತ್ತಿದ್ದ ಹಿನ್ನೆಲೆಯಲ್ಲಿ ಭಯದಿಂದ ಸೀನಿಯರ್ ವಿದ್ಯಾರ್ಥಿನಿ ತನ್ನ ಜೂನಿಯರ್ ಸ್ನೇಹಿತೆಯನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ. ಕಳೆದ ವರ್ಷ ಪರೀಕ್ಷೆಯನ್ನು ತಪ್ಪಿಸಿಕೊಳ್ಳಲು ತನಿಷ್ಕಾ ತನ್ನ ಕೈ ಕತ್ತರಿಸಿಕೊಂಡಿದ್ದಳೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಈ ಬಾರಿಯೂ ಪರೀಕ್ಷೆ ಬರೆಯಲು ಇಚ್ಛಿಸದೆ ಈ ನಿರ್ಧಾರ ಕೈಗೊಂಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಕಾಣೆಯಾಗಿರುವ ಇಬ್ಬರು ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್‌ಗಳನ್ನು ಮನೆಯಲ್ಲೇ ಬಿಟ್ಟು ಹೋಗಿದ್ದು, ಎಟಿಎಂ ಕಾರ್ಡ್ ಸೇರಿದಂತೆ ಯಾವುದೇ ಹಣವನ್ನು ತೆಗೆದುಕೊಂಡಿಲ್ಲವೆಂದು ತಿಳಿದುಬಂದಿದೆ. ಆಧಾರ್ ಕಾರ್ಡ್ ಮತ್ತು ಕಾಲೇಜು ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಿರುವ ಇವರಿಬ್ಬರೂ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಬಳಸಿಕೊಂಡಿರಬಹುದೆಂಬ ಅನುಮಾನವೂ ವ್ಯಕ್ತವಾಗಿದೆ.

ಕೆಲ ದಿನಗಳ ಹಿಂದೆ ಸ್ನೇಹಿತರಿಗೆ ಕರೆ ಮಾಡಿ ಮಲೆ ಮಹಾದೇಶ್ವರ ಬೆಟ್ಟದಲ್ಲಿದ್ದೇವೆ ಎಂದು ತಿಳಿಸಿದ್ದರು ಎನ್ನಲಾಗಿದೆ. ಒಂದು ವಾರದಲ್ಲಿ ಮತ್ತೆ ಸಂಪರ್ಕಿಸುವುದಾಗಿ ಹೇಳಿದ್ದರೂ, ಬಳಿಕ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಪ್ರಕರಣ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಕರ್ನಾಟಕ ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಒಂದು ವಾರದ ಗಡುವು ನೀಡಿದೆ ಎಂದು ತಿಳಿದುಬಂದಿದೆ. ಸುಮಾರು ಒಂದು ತಿಂಗಳಿಂದ ಮಕ್ಕಳಿಗಾಗಿ ಕಣ್ಣೀರಿಡುತ್ತಿರುವ ಕುಟುಂಬಸ್ಥರು, ಅವರು ಸುರಕ್ಷಿತವಾಗಿ ಮರಳಿ ಬರಲೆಂದು ಮನವಿ ಮಾಡಿದ್ದಾರೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!