Saturday, July 11, 2026
spot_imgspot_img
spot_imgspot_img

ಮಂಗಳೂರಿನಲ್ಲಿ ತೈಲ ಸಂಗ್ರಹಾಗಾರ ಸ್ಥಾಪನೆಗೆ ಒಎನ್‌ಜಿಸಿ ಅನುಮೋದನೆ

- Advertisement -
- Advertisement -

ನವದೆಹಲಿ: ಇರಾನ್-ಅಮೆರಿಕ ಸಂಘರ್ಷದಿಂದ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿರುವ ಹೊತ್ತಿನಲ್ಲೇ, ಭಾರತ ತನ್ನ ಇಂಧನ ಭದ್ರತೆಗೆ ಮಹತ್ತರ ಕವಚ ತೊಡಿಸಿದೆ. ಯುದ್ಧದ ಸಂದರ್ಭದಲ್ಲೂ ದೇಶದಲ್ಲಿ ತೈಲ ಕೊರತೆಯಾಗದಂತೆ ತಡೆಯಲು ಮಂಗಳೂರಿನಲ್ಲಿ ಮತ್ತೊಂದು ಬೃಹತ್ ತುರ್ತು ತೈಲ ಸಂಗ್ರಹಾಗಾರ ಸ್ಥಾಪಿಸಲು ಮುಂದಾಗಿದೆ.

ಪ್ರಮುಖ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಯಾದ ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ದೇಶದ ತುರ್ತು ಅಗತ್ಯಗಳಿಗಾಗಿ ಮಂಗಳೂರಿನಲ್ಲಿ 1.75 MMT ಸಾಮರ್ಥ್ಯದ ತೈಲ ಸಂಗ್ರಹಾಗಾರ ವಿಸ್ತರಣೆಗೆ ತಾತ್ವಿಕ ಅನುಮೋದನೆ ನೀಡಿದೆ.

ಭಾರತದಲ್ಲಿ ಇದುವರೆಗೆ ಇಂತಹ ತೈಲ ಸಂಗ್ರಹಾಗಾರಗಳನ್ನು ಸರ್ಕಾರದ ಸ್ವಾಮ್ಯದ ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ ಸಂಸ್ಥೆ ನಿರ್ಮಿಸುತ್ತಿತ್ತು. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ ಒಎನ್‌ಜಿಸಿ ತನ್ನ ಸ್ವಂತ ಸಂಪನ್ಮೂಲಗಳನ್ನು ಬಳಸಿ ಇಂತಹ ಬೃಹತ್ ತುರ್ತು ತೈಲ ಸಂಗ್ರಹಾಗಾರವನ್ನು ನಿರ್ಮಿಸುತ್ತಿದೆ.

ಪ್ರಸ್ತುತ ಮಂಗಳೂರು, ಪಾದೂರು(ಉಡುಪಿ) ಮತ್ತು ವಿಶಾಖಪಟ್ಟಣಂನಲ್ಲಿ ಒಟ್ಟು 5.33 MMT ಸಾಮರ್ಥ್ಯದ ಭೂಗತ ತೈಲ ಸಂಗ್ರಹಾಗಾರಗಳಿವೆ. ಈಗ ಮಂಗಳೂರಿನಲ್ಲಿ ಹೊಸದಾಗಿ ನಿರ್ಮಾಣವಾಗಲಿರುವ 1.75 MMT ಸಾಮರ್ಥ್ಯದ ಸಂಗ್ರಹಾಗಾರವು ದೇಶದ ತುರ್ತು ತೈಲ ಬ್ಯಾಕಪ್ ಅನ್ನು ಮತ್ತಷ್ಟು ಬಲಪಡಿಸಲಿದ್ದು, ಇದು ಸುಮಾರು 1.28 ಕೋಟಿ ಬ್ಯಾರೆಲ್ ಕಚ್ಚಾ ತೈಲಕ್ಕೆ ಸಮಾನವಾಗಿದೆ.

ಮಂಗಳೂರಿನಲ್ಲಿ ಈಗಾಗಲೇ ದಿನಕ್ಕೆ 3 ಲಕ್ಷ ಬ್ಯಾರೆಲ್ ತೈಲ ಶುದ್ಧೀಕರಿಸುವ ಬೃಹತ್ ರಿಫೈನರಿಯನ್ನು ಎಂಆರ್‌ಪಿಎಲ್ ಹೊಂದಿದ್ದು, ಹೊಸ ಸಂಗ್ರಹಾಗಾರವು ಇದರೊಂದಿಗೆ ಸಂಯೋಜನೆಗೊಳ್ಳಲಿದೆ. ಅಲ್ಲದೆ ಇದರ ವಾಣಿಜ್ಯ ಬಳಕೆಗೆ ಮುಕ್ತಾವಕಾಶ ನೀಡುವಂತೆ ಒಎನ್‌ಜಿಸಿ ಸರ್ಕಾರಕ್ಕೆ ಕೋರಿದೆ.

ಭಾರತವು ಜಗತ್ತಿನಲ್ಲೇ 3ನೇ ಅತಿ ದೊಡ್ಡ ಕಚ್ಚಾ ತೈಲ ಆಮದುದಾರ ದೇಶವಾಗಿದ್ದು, ಮಂಗಳೂರಿನ ಈ ವಿಸ್ತರಣಾ ಯೋಜನೆಯು ದೇಶದ ಇಂಧನ ಸುರಕ್ಷತೆಗೆ ದಿಕ್ಸೂಚಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ತಿಳಿದುಬಂದಿದೆ.

- Advertisement -

Related news

error: Content is protected !!