Thursday, April 25, 2024
spot_imgspot_img
spot_imgspot_img

ಮಂಗಳೂರು: ಕಟ್ಟಡ ಬಾಡಿಗೆ ಕೇಳಿದ ಮಹಿಳೆಗೆ ರೌಡಿಗಳನ್ನು ಬಿಟ್ಟು ಬೆದರಿಕೆ: “ಬಾಡಿಗೆ ಕೇಳಿದರೆ ಬಿಲ್ಡಿಂಗ್‌ಗೆ ಬಾಂಬ್ ಇಟ್ಟು ಉರುಳಿಸುತ್ತೇನೆ” ಎಂದ ಮಾಜಿ ಸಚಿವ!

- Advertisement -G L Acharya panikkar
- Advertisement -

ಮಂಗಳೂರು: ಕಟ್ಟಡದ ಬಾಡಿಗೆ ನೀಡುವಂತೆ ಕೇಳಿದ ಮಹಿಳೆ ಮೇಲೆ ಸ್ಥಳೀಯ ರೌಡಿಗಳನ್ನು ಬಿಟ್ಟು “ಬಾಡಿಗೆ ಕೇಳಿದರೆ ಬಿಲ್ಡಿಂಗ್‌ಗೆ ಬಾಂಬ್ ಇಟ್ಟು ಉರುಳಿಸುತ್ತೇನೆ” ಎಂದು ಬೆದರಿಕೆ ಹಾಕಿರುವ ಸಂಬಂಧ ಬಿಜೆಪಿ ಮಾಜಿ ಸಚಿವ ನಾಗರಾಜ ಶೆಟ್ಟಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು ಮೂಲದ ಭೂಮಿ ರಾಮಚಂದ್ರ ಅವರು ಮಾಜಿ ಸಚಿವ ನಾಗರಾಜಶೆಟ್ಟಿ ವಿರುದ್ಧ ದೂರು ನೀಡಿದವರು. ಅತ್ತಾವರ ರಸ್ತೆಯ ಕೆ.ಎಂ.ಸಿ ಆಸ್ಪತ್ರೆ ಸಮೀಪ ಭೂಮಿ ರಾಮಚಂದ್ರಪ್ಪ ಎಂಬುವರಿಗೆ ಸೇರಿದ ಬಹು ಮಹಡಿ ವಾಣಿಜ್ಯ ಕಟ್ಟಡವಿದೆ. ಮೇ. 3 ರಂದು ಬೆಳಗ್ಗೆ ಇಬ್ಬರು ಅಪರಿಚಿತ ಯುವಕರು ವಾಣಿಜ್ಯ ಕಟ್ಟಡದ ಶೆಟರ್ ಸುತ್ತಿಗೆಯಿಂದ ಹೊಡೆದು ಬೀಗ ಮುರಿದು ಒಳಗೆ ನುಗ್ಗಿದ್ದಾರೆ. ಇದಾದ ಬಳಿಕ ವಿದ್ಯಾರ್ಥಿಗಳಂತೆ ಬ್ಯಾಗು ಹಾಕಿಕೊಂಡು ಲೋಕಲ್ ರೌಡಿಗಳು ಬಂದಿದ್ದಾರೆ.

ಈ ವೇಳೆ ಬಿಜೆಪಿ ಮಾಜಿ ಸಚಿವ ನಾಗರಾಜಶೆಟ್ಟಿ ತನ್ನ ಹಿಂಬಾಲಕರ ಜತೆಗೆ ಅನಧಿಕೃತವಾಗಿ ವಾಣಿಜ್ಯ ಕಟ್ಟಡಕ್ಕೆ ಪ್ರವೇಶಿಸಿದ್ದಾರೆ. ಅಲ್ಲಿ ಭೂಮಿ ರಾಮಚಂದ್ರ ಎಂಬವರಿಗೆ ಸೇರಿದೆ ಎನ್ನಲಾದ ಲ್ಯಾಪ್‌ಟಾಪ್‌ , ವಜ್ರದ ಒಡವೆಗಳು, ಅತ್ತಾವರ ಅಪಾರ್ಟ್ ಮೆಂಟ್ ಮತ್ತು ಬಹುಮಹಡಿ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳು, ಇಂಡಮಿಟಿ ಬಾಂಡ್, ಚೆಕ್ ಬುಕ್, ಇತರೆ ದಾಖಲೆಗಳನ್ನು ನಾಗರಾಜಶೆಟ್ಟಿ ಜತೆ ಬಂದವರು ದೋಚಿಕೊಂಡು ಹೋಗಿದ್ದಾರೆ.

ಅತಿಕ್ರಮ ಪ್ರವೇಶ ಮಾಡುವ ಜತೆಗೆ ಸ್ಥಳೀಯ ಗುಂಡಾಗಳ ನೆರವಿನಿಂದ ಪೊಲೀಸರು ಈ ಹಿಂದೆ ಹಾಕಿದ್ದ ಬೀಗ ಮುರಿದು ತನ್ನದೇ ಬೀಗ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ವೇಳೆ, ನಮ್ಮನ್ನು ಯಾರಾದರೂ ತಡೆದರೆ, ಈ ಬಿಲ್ಡಿಂಗ್‌ಗೆ ಬಾಂಬ್ ಹಾಕಿ ಬೀಳಿಸುತ್ತೀನಿ ಎಂದು ಕಟ್ಟಡದ ಸೆಕ್ಯುರಿಟಿ ಗಾರ್ಡ್ ಗೋಬಿಂದ್ ಎಂಬುವರಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಭೂಮಿ ರಾಮಚಂದ್ರ ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ನಿಯಮ ಬಾಹಿರವಾಗಿ ಕಟ್ಟಡಕ್ಕೆ ಅತಿಕ್ರಮ ಪ್ರವೇಶ ಮಾಡಿ ಬೀಗ ಹೊಡೆದು ಅಲ್ಲಿನ ಲ್ಯಾಪ್‌ಟಾಪ್ ಸಮೇತ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಸಿಟಿವಿ ಆಧರಿಸಿ ದೂರು ಸಲ್ಲಿಸಿದ್ದಾರೆ.

ಕಾನೂನು ಬಾಹಿರ ಕಾಲೇಜು:

ಭೂಮಿ ಅವರ ಪಾಲಕರಾದ ಸುಶೀಲಾದೇವಿ ಮತ್ತು ಎಂ. ರಾಮಚಂದ್ರ ಅವರಿಗೆ ಸೇರಿದ ಖಾತಾ ನಂ. 86 ರಲ್ಲಿ 1 ಎಕರೆ 33 ಸೆಂಟ್ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಕಟ್ಟಡವಿದೆ. ಈ ಕಟ್ಟಡದ ಮೂಲ ಮಾಲೀಕ ಶಂಕರ್ ವಿಠ್ಠಲ್ ಮೋಟರ್ಸ್ ಎಂಬುವರಿಂದ 2013 ರಲ್ಲಿಯೇ ಭೂಮಿ ರಾಮಚಂದ್ರ ಜಂಟಿ ಮಾಲಿಕತ್ವದಲ್ಲಿ ಖರೀದಿ ಮಾಡಿದ್ದರು.

ಬಹಮಹಡಿ ಕಟ್ಟಡದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ನಾಲ್ಕನೇ ಮಹಡಿಯಲ್ಲಿ ಟೈಲರಿಂಗ್ ಯಂತ್ರಗಳನ್ನು ಹಾಕಿಡಲಾಗಿತ್ತು. ನಾಲ್ಕನೇ ಮಹಡಿಯಲ್ಲಿರುವ ನಿರಪಯುಕ್ತ ಯಂತ್ರಗಳನ್ನು ಖಾಲಿ ಮಾಡಿಸುತ್ತೇನೆ. ಅವರಿಂದ ಬಾಡಿಗೆ ಕರಾರು ನವೀಕರಣಗೊಳಿಸಿರುವುದಿಲ್ಲ ಎಂದೇ ಮೂಲ ಮಾಲೀಕರು ತಿಳಿಸಿದ್ದರು. ಆದರೆ ಖಾಲಿ ಮಾಡಿಸಿರಲಿಲ್ಲ.

ನಾಲ್ಕನೇ ಮಹಡಿಯ ಅನಧಿಕೃತ ಕಟ್ಟಡದಲ್ಲಿ ಮಾಜಿ ಸಚಿವ ನಾಗರಾಜಶೆಟ್ಟಿ ಪಾಲುದಾರಿಕೆಯಲ್ಲಿ MIFT ಕಾಲೇಜು ನಡೆಸುತ್ತಿದ್ದರು. ವಿಪರ್ಯಾಸವೆಂದರೇ ಇದೇ ಕಾಲೇಜನ್ನು ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಎಂದು ತೋರಿಸಿ ರಾಜ್ಯದ ಕೌಶಲ್ಯ ಅಭಿವೃದ್ಧಿ ನಿಗಮದಿಂದ ಆರ್ಥಿಕ ಸಹಾಯ ಪಡೆದುಕೊಂಡಿದ್ದಾರೆ. 2013 ರಲ್ಲಿ ನಾವು ಕಟ್ಟಡ ಖರೀದಿ ಮಾಡಿರುವುದಕ್ಕೆ ಎಲ್ಲಾ ದಾಖಲೆಗಳಿವೆ. 2015 ರಲ್ಲಿ ಕೇವಲ MIFT ಕಾಲೇಜನ್ನು ಮಾತ್ರ ಖರೀದಿ ಮಾಡಿದ್ದ ನಾಗರಾಜ್ ಶೆಟ್ಟಿ ನಿಯಮದ ಪ್ರಕಾರ ಜಾಗ ಖಾಲಿ ಮಾಡಬೇಕಿತ್ತು.

ಬಿಲ್ಡಿಂಗ್ ಮಾಲಿಕತ್ವ ಅಥವಾ ಲೀಸ್ ಬಗ್ಗೆ ಯಾವುದೇ ದಾಖಲೆಗಳು ಇಲ್ಲದಿದ್ದರೂ, ನಕಲಿ ದಾಖಲೆಗಳನ್ನು ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಿ ಅಕ್ರಮವಾಗಿ ಕಾಲೇಜು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಮಾಸಿಕ 6.50 ಲಕ್ಷ ರೂ. ನಂತೆ ಎಂಟು ವರ್ಷದಿಂದ ಒಂದು ರೂಪಾಯಿ ಬಾಡಿಗೆ ಕೂಡ ನೀಡಿಲ್ಲ. “ನಾನು ಅಸಹಾಯಕ ಹೆಣ್ಣು ಮಗಳು ಎಂದು ಭಾವಿಸಿ ಇದೀಗ ಕಟ್ಟಡವನ್ನೇ ಕಬ್ಜಾ ಮಾಡಲಿಕ್ಕೆ ರೌಡಿಗಳನ್ನು ಬಿಟ್ಟಿದ್ದಾನೆ” ಎಂದು ದೂರುದಾರರು ಆರೋಪಿಸಿದ್ದಾರೆ.

ನಾಗರಾಜಶೆಟ್ಟಿ ದಬ್ಬಾಳಿಕೆ ಹಾಗೂ ರೌಡಿ ಗ್ಯಾಂಗ್ ವಿರುದ್ಧ ಈ ಹಿಂದೆ ನಾನು ಏಪ್ರಿಲ್ 17 ರಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ನಾನು ಹಾಕಿದ್ದ ಬೀಗವನ್ನು ಹೊಡೆದು ಅನಧಿಕೃತವಾಗಿ ನಾಗರಾಜಶೆಟ್ಟಿ ಕಡೆಯವರು ಪ್ರವೇಶಿಸಿದ್ದರು. ದೂರಿನ ಹಿನ್ನೆಲೆಯಲ್ಲಿ ಟೈಲರಿಂಗ್ ಯಂತ್ರಗಳನ್ನು ಜಪ್ತಿ ಮಾಡುತ್ತಿದ್ದ ಪೊಲೀಸರನ್ನು ನಾಗರಾಜ್ ಶೆಟ್ಟಿ ತಡೆದಿದ್ದರು. ಸೂಕ್ತ ದಾಖಲೆ ನೀಡಿ ಯಂತ್ರಗಳನ್ನು ತೆಗೆದುಕೊಂಡು ಹೋಗುವುದಾಗಿ ಪೊಲೀಸರಿಗೆ ನಾಗರಾಜ್ ಶೆಟ್ಟಿ ತಿಳಿಸಿದ್ದರು. ಈ ವೇಳೆ ಪೊಲೀಸರೇ ಕಟ್ಟಡಕ್ಕೆ ಬೀಗ ಹಾಕಿ ಕೀ ಅವರ ಬಳಿ ಇಟ್ಟುಕೊಂಡಿದ್ದರು.

ತನ್ನ ರಾಜಕೀಯ ಪ್ರಭಾವ ಬಳಿಸಿ ಸ್ಥಳೀಯ ಗೂಂಡಾಗಳನ್ನು ಕರೆಸಿ ಇದೀಗ ಏಕಾಏಕಿ ಕಟ್ಟಡಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ನನ್ನ ಕಚೇರಿಯಲ್ಲಿಟ್ಟಿದ್ದ ದಾಖಲೆಗಳನ್ನು ಕದ್ದೊಯ್ದಿದ್ದಾರೆ. ಮಾಜಿ ಸಚಿವನಾಗಿ ಕಟ್ಟಡಕ್ಕೆ ಬಾಡಿಗೆ ನೀಡದೇ, ಇದೀಗ ಕಟ್ಟಡವನ್ನೇ ಕಬ್ಜಾ ಮಾಡಲು ತನ್ನ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ. ಇಷ್ಟೆಲ್ಲಾ ದೌರ್ಜನ್ಯ ನಡೆಯುತ್ತಿದ್ದರೂ, ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಭೂಮಿ ರಾಮಚಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

driving
- Advertisement -

Related news

error: Content is protected !!