ಮಂಗಳೂರು: ಮಂಗಳೂರಿನಲ್ಲಿ ಪ್ರವಾಸೋದ್ಯಮದ ಬೆಳವಣಿಗೆಗೆ ಸಾಕಷ್ಟು ಅವಕಾಶ ಇದ್ದು ರಾಜ್ಯ, ಕೇಂದ್ರ ಸರಕಾರದ ಸಹಕಾರದಲ್ಲಿ ಅಭಿವೃದ್ಧಿ ಮಾಡುವ ಯೋಚನೆ ಇದೆ ಎಂದು ರಾಜ್ಯ ಪ್ರವಾಸೋದ್ಯಮ, ಪರಿಸರ, ಜೀವಶಾಸ್ತ್ರ ಸಚಿವ ಸಿ.ಪಿ. ಯೋಗೀಶ್ವರ್ ಹೇಳಿದರು.

ಅವರು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಬಹು ನಿರೀಕ್ಷಿತ, ಮಹಾ ಸಮ್ಮೀಲನ ಎಂದೇ ಖ್ಯಾತವಾಗಿರುವ ಕೊಡಿಯಾಲ್ ಸ್ಫೋರ್ಟ್ ಎಸೋಸಿಯೇಶನ್ ಪ್ರಸ್ತುತಪಡಿಸುವ ಐದನೇ ವರ್ಷದ ಫುಜ್ಲಾನಾ ಜಿಪಿಎಲ್ 2021 ಕಾರ್ಯಕ್ರಮಕ್ಕೆ ಶುಕ್ರವಾರ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಕ್ರಿಕೆಟ್ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸುಶಿಕ್ಷಿತ ಸಮಾಜವಾಗಿರುವ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಬದ್ಧತೆ, ಪ್ರಾಮಾಣಿಕತೆಯಿಂದ ರಾಷ್ಟ್ರಮಟ್ಟದಲ್ಲಿಯೇ ಹಲವು ರಂಗಗಳಲ್ಲಿ ತಮ್ಮದೇ ಛಾಪನ್ನು ಒತ್ತಿ ಮಾದರಿಯಾಗಿದೆ ಎಂದರು.

ಸರಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ತಾನು ಶಾಸಕ ವೇದವ್ಯಾಸ ಕಾಮತ್ ಅವರ ಪ್ರೀತಿಯ ಕರೆಗೆ ಓಗೊಟ್ಟು ಬಂದಿದ್ದರೂ ಹಬ್ಬದ ವಾತಾವರಣದಲ್ಲಿ ಈ ಅದ್ದೂರಿ ಉತ್ಸವವನ್ನು ಕಣ್ಣಾರೆ ಕಂಡು ಸಣ್ಣ ಸಮುದಾಯವಾದರೂ ದೇಶದ ಆರ್ಥಿಕತೆ, ಸಂಸ್ಕೃತಿ, ಬ್ಯಾಂಕಿಂಗ್, ಶಿಕ್ಷಣ ಸಹಿತ ಹಿಂದೂತ್ವವನ್ನು ಸೇರಿಸಿಕೊಂಡು ಎಲ್ಲಾ ಕಡೆ ವಿಶಿಷ್ಟ ಕೊಡುಗೆ ಕೊಟ್ಟಿರುವ ಜಿಎಸ್ ಬಿ ಸಮುದಾಯದವರನ್ನು ಕಂಡು ಖುಷಿಯಾಗುತ್ತದೆ ಎಂದು ಹೇಳಿದರು.

ಸಂಜೆ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಬಳಿಕ ಸಾಂಕೇತಿಕವಾಗಿ ಬ್ಯಾಟಿಂಗ್ ಮೂಲಕ ಸಚಿವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಮೇಯರ್ ದಿವಾಕರ್ ಪಾಂಡೇಶ್ವರ್, ಜಿಯೋಮಾರ್ಟ್.ಕಾಮ್ ನ ಗೌರವ್, ಸಹ್ಯಾದ್ರಿ ಕಾಲೇಜಿನ ಅಧ್ಯಕ್ಷ ಮಂಜುನಾಥ ಭಂಡಾರಿ, ಹಾಂಗ್ಯೋ ಐಸ್ ಕ್ರೀಂನ ಪ್ರದೀಪ್ ಪೈ, ಆಭರಣ್ ಜ್ಯುವೆಲ್ಲರ್ಸ್ ನ ಅಕ್ಷರ್ ಕಾಮತ್, ಡಿಆರ್ ಎಸ್ ಇನ್ ಫ್ರಾಟೆಕ್ ನ ರಾಘವೇಂದ್ರ ಕುಡ್ವ, ದೇವಗಿರಿ ಟೀ ನಂದಗೋಪಾಲ್ ಶೆಣೈ, ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್, ಲೆಕ್ಕಪರಿಶೋಧಕರುಗಳಾದ ಎಸ್ ಎಸ್ ನಾಯಕ್, ಜಗನ್ನಾಥ್ ಕಾಮತ್, ಉದ್ಯಮಿಗಳಾದ ನಿತ್ಯಾನಂದ ಪೈ ಕಾರ್ಕಳ, ನರೇಂದ್ರ ನಾಯಕ್, ವಾಸುದೇವ ಕಾಮತ್, ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಪ್ರಶಾಂತ್ ರಾವ್, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಹನುಮಂತ ಕಾಮತ್, ಯೂತ್ ಆಫ್ ಜಿಎಸ್ ಬಿ ಸಂಚಾಲಕರಾದ, ವಿವೇಕ್ ಟ್ರೇಡರ್ಸ್ ಮಾಲೀಕ ಮಂಗಲ್ಪಾಡಿ ನರೇಶ್ ಶೆಣೈ, ಯುವ ಉದ್ಯಮಿಗಳಾದ ನರೇಶ್ ಪ್ರಭು, ಚೇತನ್ ಕಾಮತ್ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.










