



ಮಂಗಳೂರು: ರಾಷ್ಟ್ರೀಯ ಅಪರಾಧ ತನಿಖಾ ದಳ ಅಧಿಕಾರಿ ಎಂದು ಸುಳ್ಳು ಹೇಳಿ ಹಣ ಸುಲಿಗೆ ಹಾಗೂ ವಂಚನೆ ನಡೆಸುತ್ತಿದ್ದ ಕುಖ್ಯಾತ ಆರೋಪಿ ಸ್ಯಾಮ್ ಪೀಟರ್ @ ಡ್ಯಾನಿ ತಾರಕನ್ @ ಆಂಟನಿ(64)ಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬಂಧಿತನಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸುಮಾರು 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾರ್ಯಾಚರಣೆ ನಡೆಸಿ ಪತ್ತೆ ಮಾಡಲಾಗಿದೆ.
ಆರೋಪಿ ಸ್ಯಾಮ್ ಪೀಟರ್ ತನ್ನದೇ ಗ್ಯಾಂಗ್ ರಚಿಸಿಕೊಂಡು NCIB ಅಧಿಕಾರಿ ಎಂದು ಪರಿಚಯಿಸಿಕೊಂಡು, ಹಣಕಾಸು ವಿವಾದ, ಬ್ಯಾಂಕ್ ವಂಚನೆ ಹಾಗೂ ತೆರಿಗೆ ಪ್ರಕರಣಗಳಲ್ಲಿ ಸಿಲುಕಿರುವವರನ್ನು ಗುರಿಯಾಗಿಸಿಕೊಂಡು ಹಣ ಪಡೆದು ವಂಚನೆ ನಡೆಸುತ್ತಿದ್ದ. 2019ರ ಆಗಸ್ಟ್ 16ರಂದು ಮಂಗಳೂರು ಕದ್ರಿ ಪೊಲೀಸರು ಪಂಪ್ವೆಲ್ನ ಲಾಡ್ಜ್ನಲ್ಲಿ ದಾಳಿ ನಡೆಸಿ ಆರೋಪಿ ಸೇರಿ 8 ಮಂದಿಯನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ವಿಚಾರಣೆಗೆ ಹಾಜರಾಗದೆ 3 ವರ್ಷಗಳಿಂದ ತಲೆಮರೆಸಿಕೊಂಡಿದ್ದ.
ತನ್ನ ಗುರುತು ಮರೆಮಾಚಲು ಆರೋಪಿ ವಿವಿಧ ಹೆಸರುಗಳನ್ನು ಬಳಸುತ್ತಿದ್ದ. ಆಂಟನಿ, ರಾಹುಲ್ ಪೀಟರ್, ರಾಜೇಶ್ ರಾಬಿನ್ಸನ್, ರೀತು ರಿಚರ್ಡ್ಸನ್, 1) ಆಂಟನಿ, 2) ರಾಹುಲ್ ಪೀಟರ್, 3) ಸ್ಯಾಮ್ ಪೀಟರ್, 4) ರಾಜೇಶ್ ರಾಬಿನ್ಸನ್, 5) ರೀತು ರಿಚರ್ಡ್, 6) ರಾಯ್ ಜೇಕಬ್, 7) ರಾಬಿನ್ ರಿಚರ್ಡ್ಸನ್, 8) ರಾಬಿನ್ ಸನ್ 9) ಆಂಟೋನಿ ಪ್ರಾನ್ಸಿಸ್ 10) ಶಾರೂನ್ ಪ್ರಾನ್ಸಿಸ್ ಹಾಗೂ ಪ್ರಸ್ತುತ 11) ಡ್ಯಾನಿ ತಾರಕನ್ ಸೇರಿದಂತೆ 11 ಹೆಸರುಗಳಿಂದ ಗುರುತಿಸಿಕೊಂಡಿದ್ದಾನೆ. ‘ರಾಹುಲ್ ಪೀಟರ್’ ಎಂಬ ಹೆಸರಿನಲ್ಲಿ ಆರೋಪಿಯ ವಿರುದ್ಧ 2001ರಿಂದಲೇ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿತ್ತು.
ಆರೋಪಿಯ ವಿರುದ್ಧ ಮಂಗಳೂರು ನಗರದ ಪೂರ್ವ, ಉಳ್ಳಾಲ, ಕೊಣಾಜೆ ಠಾಣೆಗಳ ಜೊತೆಗೆ ಬೆಂಗಳೂರು, ಚಿಕ್ಕಬಳ್ಳಾಪುರ, ಉಡುಪಿ, ಕುಶಾಲನಗರ ಹಾಗೂ ಬಿಹಾರ, ತಮಿಳುನಾಡು, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ 7 ರಾಜ್ಯಗಳಲ್ಲಿ ಸುಮಾರು 17 ವಂಚನೆ ಪ್ರಕರಣಗಳು ದಾಖಲಾಗಿವೆ.ಉಳ್ಳಾಲ ಠಾಣೆಯಲ್ಲಿ 17 ಬಾರಿ ವಾರೆಂಟ್, ಪೂರ್ವ ಠಾಣೆಯಲ್ಲಿ 14 ಬಾರಿ ವಾರೆಂಟ್ ಹಾಗೂ ಪ್ರೊಕ್ಲೊಮೇಷನ್ ಹೊರಡಿಸಲಾಗಿತ್ತು.ಬಂಧಿತ ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಂಗಳೂರು ನಗರ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.








