ಮಂಗಳೂರು: ಮಂಗಳೂರಿನ ಕೊಡಿಯಾಲ್ ಬೈಲ್ ಪ್ರತಿಷ್ಠಿತ ಬಿಲ್ಡರ್, ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಗಲಾಟೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಕಿಡಿಗೇಡಿಗಳನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ. ಜಿತೇಂದ್ರ ಕೊಟ್ಟಾರಿ ಅವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಎನ್.ಎಸ್.ಯು.ಐ ನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಎನ್.ಎಸ್.ಯು.ಐ ಕಾರ್ಯಕರ್ತ ಅನುಷ್ ಶೆಟ್ಟಿ ಹಾಗೂ ಅಂಕಿತ್ ಶೆಟ್ಟಿ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 9ರ ಬುಧವಾರದಂದು ರಾತ್ರಿ ಬೆಂಗಳೂರಿನಿಂದ ಆಗಮಿಸಿದ್ದ ಮಗಳನ್ನು ಕರೆ ತರಲು ಮಂಗಳೂರು ಏರ್‌ಪೋರ್ಟ್‌ಗೆ ಜಿತೇಂದ್ರ ಕೊಟ್ಟಾರಿ ಆಗಮಿಸಿದ್ದರು. ಬಳಿಕ ತನ್ನ ಕಾರಿನಲ್ಲಿ ಮಗಳ ಜೊತೆ ಮಂಗಳೂರಿನ ಮನೆಯತ್ತ ತೆರಳುತ್ತಿದ್ದರು. ಈ ವೇಳೆ ಅನುಷ್ ಹಾಗೂ ಅಂಕಿತ್ ಇದ್ದ ಕಾರನ್ನು ಜಿತೇಂದ್ರ ಕೊಟ್ಟಾರಿ ಓವರ್ ಟೇಕ್ ಮಾಡಿದ್ದಾರೆ. ಇದೇ ಕ್ಷುಲ್ಲಕ ಕಾರಣವನ್ನೇ ಹಿಡಿದುಕೊಂಡು ಜಿತೇಂದ್ರ ಕೊಟ್ಟಾರಿ ಅವರನ್ನು ಹಿಂಬಾಲಿಕೊಂಡು ಮನೆವರೆಗೂ ಬಂದಿದ್ದಾರೆ.
ಕುಡಿತದ ಮತ್ತಿನಲ್ಲಿದ್ದ ಯುವಕರು, ಜಿತೇಂದ್ರ ಕೊಟ್ಟಾರಿ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅಲ್ಲದೇ ಜಿತೇಂದ್ರ ಕೊಟ್ಟಾರಿ ಮೇಲೆ ಹಲ್ಲೆ ನಡೆಸಿದ್ದು ತಡೆಯಲು ಬಂದ ಪತ್ನಿ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಇನ್ನು ಘಟನೆ ಸಂಬಂಧಿಸಿ ಬರ್ಕೆ ಠಾಣೆಗೆ ಜಿತೇಂದ್ರ ಕೊಟ್ಟಾರಿ ದೂರು ನೀಡಿದ್ದಾರೆ. ದೂರು ಪಡೆದು ಎಫ್‌ಐಆರ್ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.
ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರ ಅಣ್ಣನ ಮಗ, ಮಂಗಳೂರಿನಲ್ಲಿ ಎನ್‌ಎಸ್ ಯುಐ ಕಾರ್ಯಕರ್ತನಾಗಿರುವ ಅನುಷ್ ಶೆಟ್ಟಿ ಮತ್ತು ಕದ್ರಿ ನಿವಾಸಿ ಅಂಕಿತ್ ಶೆಟ್ಟಿ ಬಂಧಿತರು. ಅನುಷ್ ಶೆಟ್ಟಿ ಕಳೆದ ಚುನಾವಣೆ ಸಂದರ್ಭದಲ್ಲಿ ನೋಟಾ ಪರವಾಗಿ ಅಭಿಯಾನ ನಡೆಸಿದ್ದ.