

ನವವಿವಾಹಿತೆಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೀರ್ಥಹಳ್ಳಿಯ ನಾಲೂರು ಸಮೀಪದ ದಾಸನಕೋಡಿ ಎಂಬಲ್ಲಿ ನಡೆದಿದೆ.
ಬಿಜ್ಜಳ ಗ್ರಾಮದ ನಿವಾಸಿ ಶರ್ಮಿತಾ ಬಿ.ಯು (24) ಮೃತ ನವವಿವಾಹಿತೆ ಎಂದು ಗುರುತಿಸಲಾಗಿದೆ. ಶರ್ಮಿತಾ ಅವರು 2023ರ ಮಾರ್ಚ್ ನಲ್ಲಿ ದಾಸನಕೊಡಿ ಗ್ರಾಮದ ಯುವಕ ವಿದ್ಯಾರ್ಥ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ಶರ್ಮಿತಾ ಅವರ ಪತಿ ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ತೆರಳಿದ್ದರು. ಪತಿಯ ಮನೆಯಲ್ಲಿ ಅತ್ತೆ ಮಾವ ಇದ್ದರು. ಶಮಿತಾ ರಾತ್ರಿ ಮಲಗಲು ಎಂದು ಮನೆಯ ಉಪ್ಪರಿಗೆ ಕೊಠಡಿಗೆ ತೆರಳಿದ್ದರು. ಆದರೆ ಬೆಳಗ್ಗೆ ಆಕೆ ಬಾಗಿಲು ತೆರೆದಿರಲಿಲ್ಲ.
ಹಾಗಾಗಿ ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಯುವತಿಯ ಪಾಲಕರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಶರ್ಮಿತಾ ಅವರ ಪಾಲಕರು ಬಂದು ಕೊಠಡಿಯ ಬಾಗಿಲು ಒಡೆದಿದ್ದಾರೆ. ಆಕೆಯ ಮೃತದೇಹದ ಬಳಿ ಡೆತ್ ನೋಟ್ ಇಟ್ಟಿತ್ತು. ಅದರಲ್ಲಿ ‘ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆಯಲಾಗಿದೆ ಎನ್ನಲಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಸಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಲಾಗಿದೆ.








