Monday, July 27, 2026
spot_imgspot_img
spot_imgspot_img

ಬಂಟ್ವಾಳ ತಾಲೂಕಿನಾದ್ಯಂತ ಅಕ್ರಮ-ಸಕ್ರಮ ನೆಪದಲ್ಲಿ ಭಾರೀ ಪ್ರಮಾಣದ ಸರ್ಕಾರಿ ಜಮೀನು ಗೋಲ್ಮಾಲ್; ಸಮಗ್ರ ತನಿಖೆಗೆ ನಾಗರಿಕರ ಒತ್ತಾಯ

- Advertisement -
- Advertisement -

ಬಂಟ್ವಾಳ: 2000-2025ರ ತನಕ ಇಪ್ಪತೈದು ವರ್ಷಗಳಲ್ಲಿ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ನಡೆದ ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಯಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಖದೀಮರ ಪಾಲಾಗಿವೆ. ಯಾವುದೇ ರೀತಿಯ ಕೃಷಿ ಉದ್ದೇಶದ ಕೃತಗಳಿಲ್ಲದ ಸರ್ಕಾರಿ ಜಮೀನುಗಳು ದಲ್ಲಾಳಿಗಳ ಮತ್ತು ಕಂದಾಯ ಅಧಿಕಾರಿಗಳು, ಸಿಬ್ಬಂದಿಗಳ ಕೃಪಾಕಟಾಕ್ಷದಿಂದಾಗಿ ಭೂಗಳ್ಳರ ಪಾಲಾಗಿದೆ.

ಯಾರದೋ ಹೆಸರಲ್ಲಿ ಇನ್ಯಾವುದೋ ಗ್ರಾಮದ ಸರ್ಕಾರಿ ಜಮೀನುಗಳು ಅಕ್ರಮ-ಸಕ್ರಮದ ಮೂಲದ ಭೂಗಳ್ಳರ ಹೆಸರಲ್ಲಿ ನಮೂದಿಸುವಲ್ಲಿ ಬ್ರೋಕರುಗಳು ಯಶಸ್ವಿಯಾಗಿದ್ದಾರೆ. ಕಂದಾಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಲಕ್ಷ ಲಕ್ಷ ಲಂಚ ಎಸೆದು ಸರ್ಕಾರಿ ಜಮೀನು ನುಂಗುವಲ್ಲಿ ಸಫಲರಾಗಿದ್ದಾರೆ. ಸರ್ಕಾರಿ ಜಮೀನಿನ ಪಕ್ಕದಲ್ಲೇ ಹಾದುಹೋಗುವ ಸಾರ್ವಜನಿಕ ರಸ್ತೆಗಳನ್ನೂ ಖೊಟ್ಟಿ ದಾಖಲೆಗಳ ಮೂಲಕ ನುಂಗುವಲ್ಲಿ ಭೂಗಳ್ಳರು ಯಶಸ್ವಿಯಾಗಿದ್ದಾರೆ.

ಆದರೆ ಸಂಬಂಧಿಸಿದ ಪಿಡಬ್ಲ್ಯೂಡಿ ಅಧಿಕಾರಿಗಳಾಗಲೀ, ಸಂಬಂಧಿತ ಇಲಾಖೆಗಳ ಅಧಿಕಾರಿಗಳು ಈವರೆಗೂ ಎಚ್ಚೆತ್ತುಕೊಳ್ಳದೇ ಭೂಗಳ್ಳರಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಯಾರದ್ದೋ ಹೆಸರಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿ ಮಾಡಿಸಿದ ಬಳಿಕ ತಾಲೂಕು ಕಛೇರಿಯ ನಿರ್ಧಿಷ್ಟ ಸಿಬ್ಬಂದಿಗಳ ಮೂಲಕ ಮಂಜೂರಾತಿ ಆದೇಶಕ್ಕೆ ಇನ್ನೊಂದಿಷ್ಟು ಸರ್ಕಾರಿ ಜಮೀನುಗಳ ಸರ್ವೆ ನಂ.ದಾಖಲಿಸಿ, ನಕ್ಷೆ ಸೃಷ್ಟಿಸಿ ಇಲಾಖೆಯನ್ನೇ ಹೈಜಾಕ್ ಮಾಡುವಲ್ಲಿ ಭೂಗಳ್ಳರು ಸಫಲರಾಗಿದ್ದಾರೆ. ಮಂಜೂರಾತಿ ಮಾಡಿಸಿಕೊಂಡ ಬಳಿಕ ಅರ್ಜಿದಾರರ ಹೆಸರಲ್ಲಿ ಸೃಷ್ಟಿಸಿದ ದಾಖಲೆಗಳನ್ನು ದಾನ ಶಾಸನದ ಮೂಲಕ ಭೂಗಳ್ಳರು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.

ನಕಲಿ ದಾಖಲೆ ಸಲ್ಲಿಸಿ ಅಕ್ರಮ-ಸಕ್ರಮ ಮೂಲಕ ಪಡೆದ ಜಮೀನುಗಳನ್ನು(ಲಂಚ ನೀಡಿ) ಎಕ್ರೆ ಗಟ್ಟಲೆ ಭೂ ಪರಿವರ್ತನೆ ಮಾಡಿಸಿ ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡುವ ವ್ಯವಸ್ಥಿತ ಜಾಲವೊಂದು ಬಂಟ್ವಾಳ ತಾಲೂಕಿನಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಸಿದೆ. ಬಂಟ್ವಾಳ ತಾಲೂಕು ಕಛೇರಿಯ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ಬಾರಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸಿಬ್ಬಂದಿಗಳು ಹಾಗೂ ಬ್ರೋಕರುಗಳನ್ನು ಜೈಲಿಗಟ್ಟಿದ್ದಾರೆ. ಆದರೆ ಭ್ರಷ್ಟ ಸಿಬ್ಬಂದಿಗಳಿಗೆ ಜಾಮೀನು ನೀಡಿ ಕೆಲ ದಿನಗಳಲ್ಲೇ ಬಿಡುಗಡೆಗೊಳಿಸುವಲ್ಲಿ ದಲ್ಲಾಳಿಗಳ ನಾಯಕನೊಬ್ಬ ಯಶಸ್ವಿಯಾಗಿದ್ದಾನೆ.

ಯಾವುದೇ ಕೃಷಿ ಜಮೀನು ಹೊಂದಿರದ ದಲ್ಲಾಳಿಗಳ ನಾಯಕನೊಬ್ಬ ಇಲಾಖೆಯ ಭ್ರಷ್ಟರಿಗೆ ಲಕ್ಷ ಲಕ್ಷ ಮಾಮೂಲಿ ಹಣ ಎಸೆದು ಅಡ್ಡದಾರಿ ಮೂಲಕ ತನ್ನ ಹಾಗೂ ಕುಟುಂಬಸ್ಥರ ಹೆಸರಲ್ಲಿ 23ಎಕರೆಗೂ ಹೆಚ್ಚು ಬೇನಾಮಿ ಜಮೀನು ಹೊಂದಿರುವುದು ಇದೀಗ ದಾಖಲೆಗಳ ಮೂಲಕ ಬಯಲಾಗಿದೆ.

ಸರ್ಕಾರಿ ಜಮೀನುಗಳ ಬ್ರಹ್ಮಾಂಡ ಗೋಲ್ಮಾಲ್ ಪ್ರಕರಣಗಳು ಬಯಲಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೊಳ್ನಾಡು ಗ್ರಾಮ ಪಂಚಾಯತ್ ತನ್ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ಯಾವುದೇ ಕೃಷಿ ಸಂಬಂಧಿತ ಕೃತಗಳಿಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಹಣ ಬಲದಿಂದ ಅಡ್ಡದಾರಿ ಮೂಲಕ ಮಂಜೂರಾತಿ ಮಾಡಿಸಿಕೊಂಡ ಬಳಿಕ ಅಡಿಕೆ, ತೆಂಗು ಕೃಷಿ ಮಾಡುವ ಮೂಲಕ ಕಂದಾಯ ಇಲಾಖೆಯ ನಿಯಮ -ಕಾನೂನುಗಳ ಗಾಳಿಗೆ ತೂರಿದ ಪ್ರಕರಣಗಳ ಸಮಗ್ರ ತನಿಖೆ ನಡೆಸುವಂತೆ ಕೊಳ್ನಾಡು ಗ್ರಾಮ ಪಂಚಾಯತ್ ನಿರ್ಣಯ ಕೈಗೊಂಡಿದೆ.

ಕಳೆದ ಇಪ್ಪತ್ತೈದು ವರ್ಷಗಳಲ್ಲಿ ಅಕ್ರಮ, ಭ್ರಷ್ಟಾಚಾರದ ಮೂಲಕ ಕಂದಾಯ ಇಲಾಖೆಯ ನಿಯಮ ಗಾಳಿಗೆ ತೂರಿ ನಡೆದ ಅಕ್ರಮ-ಸಕ್ರಮಗಳ ಬಗ್ಗೆ ಸಮಗ್ರವಾದ ತನಿಖೆ ನಡೆಸಿ ಸರ್ಕಾರಿ ಜಮೀನು ನುಂಗಿದ ಭೂಗಳ್ಳ ತಿಮಿಂಗಿಲಗಳನ್ನು ಮತ್ತು ಅವರೊಂದಿಗೆ ಶಾಮೀಲಾದ ಭ್ರಷ್ಟ ಅಧಿಕಾರಿಗಳ, ಸಿಬ್ಬಂದಿಗಳ ವಿರುದ್ಧ ಮಾನ್ಯ ಕಂದಾಯ ಸಚಿವರು ವಿಶೇಷ ತಂಡ ರಚಿಸುವ ಮೂಲಕ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!