


ಆಗಸ್ಟ್ 15 ಎಂದಾಕ್ಷಣ ಶಾಲೆಯ ಮೈದಾನದಲ್ಲಿ ಮೊಳಗುತ್ತಿದ್ದ ಪ್ರಾರ್ಥನೆ, ಬೆಳಗಿನ ಜಾವ ಕೇಳಿಬರುತ್ತಿದ್ದ ದೇಶಭಕ್ತಿಗೀತೆ, ಕೈಯಲ್ಲಿ ಹಿಡಿದಿದ್ದ ಪುಟ್ಟ ತ್ರಿವರ್ಣ ಧ್ವಜ, ಮನಸ ತುಂಬಿಕೊಂಡಿದ್ದ ದೇಶಪ್ರೇಮದ ಉತ್ಸಾಹ, ಮತ್ತು ಮನೆಗೆ ಮರಳಿದ ಮೇಲೂ ಮನಸ್ಸಿನಲ್ಲಿ ಉಳಿಯುತ್ತಿದ್ದ ಒಂದು ವಿಚಿತ್ರ ಹೆಮ್ಮೆಯ ಕ್ಷಣ ಮನದಲ್ಲಿ ಹಾದು ಹೋಗುತ್ತದೆ..
ಇಂದು ಅದೇ ಆಗಸ್ಟ್ 15 ಮತ್ತೆ ಬಂದಿದೆ. ಇಂದು ದೇಶದೆಲ್ಲೆಡೆ ರಾಷ್ಟ್ರಧ್ವಜಗಳು ಹಾರುತ್ತವೆ. ಭಾಷಣಗಳು ಮೊಳಗುತ್ತವೆ. ದೇಶಭಕ್ತಿಗೀತೆಗಳು ಕೇಳಿಬರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ದೇಶಭಕ್ತಿಯ ಸಂದೇಶಗಳು ಹರಿದಾಡುತ್ತವೆ. ಆದರೆ ಒಂದು ಪ್ರಶ್ನೆ ಮಾತ್ರ ಮನಸ್ಸಿನ ಬಾಗಿಲನ್ನು ತಟ್ಟುತ್ತದೆ. ‘ಆ ಸಂಭ್ರಮ ನಮ್ಮೊಳಗೆ ನಿಜವಾಗಿಯೂ ಅರಳುತ್ತಿದೆಯೇ?’
ಸ್ವಾತಂತ್ರ್ಯವೆಂದರೆ ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆದ ದಿನವನ್ನು ಮಾತ್ರ ನೆನಪಿಸಿಕೊಳ್ಳುವುದಲ್ಲ. ಸ್ವಾತಂತ್ರ್ಯವೆಂದರೆ ನಮ್ಮ ದೇಶವನ್ನು ನಾವು ಹೇಗೆ ಕಟ್ಟಿಕೊಳ್ಳುತ್ತಿದ್ದೇವೆ ಎಂಬುದನ್ನು ಪ್ರತಿದಿನವೂ ಪ್ರಶ್ನಿಸಿಕೊಳ್ಳುವುದು. 1947ರ ಆಗಸ್ಟ್ 15ರಂದು ದೊರೆತ ರಾಜಕೀಯ ಸ್ವಾತಂತ್ರ್ಯವು ಒಂದು ರಾಷ್ಟ್ರದ ಹೋರಾಟದ ಅಂತ್ಯವಾಗಿರಲಿಲ್ಲ; ಅದು ಹೊಸ ಭಾರತದ ಆರಂಭವಾಗಿತ್ತು.
ಆ ಆರಂಭದ ಹಿಂದೆ ಎಷ್ಟೊಂದು ತ್ಯಾಗವಿತ್ತು! ಜೈಲಿನ ಕಂಬಿಗಳ ಹಿಂದೆ ಕಳೆದ ದಿನಗಳು, ಕುಟುಂಬದಿಂದ ದೂರವಾದ ಬದುಕು, ಲಾಠಿ ಏಟುಗಳು, ಹೋರಾಟಗಳು, ಬಲಿದಾನಗಳು ಇವೆಲ್ಲದರ ಫಲವಾಗಿ ನಮಗೆ ದೊರೆತ ಸ್ವಾತಂತ್ರ್ಯವದು. ಆ ಸ್ವಾತಂತ್ರ್ಯವನ್ನು ನಾವು ಎಷ್ಟು ಗೌರವದಿಂದ ಉಳಿಸಿಕೊಂಡಿದ್ದೇವೆ ಎಂಬುದು ಪ್ರತಿಯೊಬ್ಬ ನಾಗರೀಕನೂ ತನಗೆ ತಾನೇ ಕೇಳಿಕೊಳ್ಳಬೇಕಾದ ಪ್ರಶ್ನೆ.
ನಮ್ಮ ಬಾಲ್ಯದ ಸ್ವಾತಂತ್ರ್ಯೋತ್ಸವದ ನೆನಪುಗಳು ಇಂದಿಗೂ ಎಷ್ಟು ಜೀವಂತ! ಶಾಲೆಯಲ್ಲಿ ಹದಿನೈದು ದಿನಗಳ ಮುಂಚೆಯೇ ಸಿದ್ಧತೆ ಆರಂಭವಾಗುತ್ತಿತ್ತು. ಯಾರಿಗೆ ಹಾಡು? ಯಾರಿಗೆ ಭಾಷಣ? ಯಾರಿಗೆ ನೃತ್ಯ? ಯಾರಿಗೆ ಧ್ವಜ ಹಿಡಿಯುವ ಅವಕಾಶ? ಎಂಬ ಚರ್ಚೆಗಳು. ಮೈದಾನ ಸ್ವಚ್ಛಗೊಳಿಸುವುದು, ತ್ರಿವರ್ಣ ಬಣ್ಣಗಳಿಂದ ಅಲಂಕರಿಸುವುದು, ಹೂವಿನ ರಂಗೋಲಿ ಹಾಕುವುದು ಹೀಗೆ ಪ್ರತಿಯೊಂದು ಕೆಲಸವೂ ಒಂದು ಹಬ್ಬದ ಭಾಗವೇ ಆಗಿತ್ತು.
ಆ ದಿನ ಬೆಳಗ್ಗೆ ಶಾಲೆಗೆ ಹೋಗುವುದೇ ಒಂದು ಹೆಮ್ಮೆಯ ಪಯಣ. ಸಮವಸ್ತ್ರ ಧರಿಸಿ, ಕೈಯಲ್ಲಿ ಹೂ ಹಿಡಿದು, ಸ್ನೇಹಿತರೊಂದಿಗೆ ನಡೆದು ಹೋಗುತ್ತಿದ್ದ ಕ್ಷಣಗಳಿಗೂ ಒಂದು ಅರ್ಥವಿತ್ತು. ಧ್ವಜಾರೋಹಣದ ಕ್ಷಣದಲ್ಲಿ ತ್ರಿವರ್ಣ ಧ್ವಜ ನಿಧಾನವಾಗಿ ಮೇಲೇರಿದಾಗ, ಅದರೊಂದಿಗೆ ನಮ್ಮ ಪುಟ್ಟ ಹೃದಯಗಳೂ ಎತ್ತರಕ್ಕೆ ಏರುತ್ತಿದ್ದವು.
ಬಹುಮಾನ ಸಿಕ್ಕರೆ ಆ ದಿನದ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ಒಂದು ಪೆನ್ಸಿಲ್, ಒಂದು ಪೆನ್, ಒಂದು ಪುಟ್ಟ ಪುಸ್ತಕವೇ ಆಗಿದ್ದರೂ ಅದು ನಮಗೆ ಅಮೂಲ್ಯ ಸಂಪತ್ತು. ಏಕೆಂದರೆ, ಸಂತೋಷ ಅದರ ಬೆಲೆಯಲ್ಲಲ್ಲ, ಅದರ ಹಿಂದೆ ದೊರೆತ ಮೆಚ್ಚುಗೆಯಲ್ಲಿತ್ತು. ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಕನಸು ಆಗಲೇ ಮೊಳಕೆಯೊಡೆಯುತ್ತಿತ್ತು.
ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಶಾಲೆಗಳಲ್ಲಿ ಸ್ವಾತಂತ್ರ್ಯೋತ್ಸವ ನಡೆಯುತ್ತದೆ. ಕಾರ್ಯಕ್ರಮಗಳು ನಡೆಯುತ್ತವೆ. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಅನೇಕ ಕಡೆ ಅದರೊಳಗಿನ ಭಾವನೆಗಿಂತ ಕಾರ್ಯಕ್ರಮ ಮುಗಿಸುವ ಆತುರವೇ ಹೆಚ್ಚಾಗಿರುವಂತೆ ಕಾಣುತ್ತದೆ. ಕೆಲವರಿಗೆ ಆಗಸ್ಟ್ 15 ಎಂದರೆ ರಜೆ. ಕೆಲವರಿಗೆ ಸಾಮಾಜಿಕ ಜಾಲತಾಣದಲ್ಲಿ ತ್ರಿವರ್ಣ ಧ್ವಜದ ಚಿತ್ರ ಹಾಕುವ ದಿನ. ಇನ್ನೂ ಕೆಲವರಿಗೆ ಒಂದು ಕಾರ್ಯಕ್ರಮ ಮುಗಿಸಿ ಮನೆಗೆ ತೆರಳುವ ದಿನ. ಇದು ಕೇವಲ ಮಕ್ಕಳ ತಪ್ಪಲ್ಲ. ನಾವು ದೊಡ್ಡವರೇ ಅವರಿಗೆ ಸ್ವಾತಂತ್ರ್ಯದ ಅರ್ಥವನ್ನು ಎಷ್ಟು ಹೇಳಿಕೊಟ್ಟಿದ್ದೇವೆ?
ದೇಶಪ್ರೇಮ ಎಂದರೆ ಕೇವಲ ಧ್ವಜವನ್ನು ಹಿಡಿಯುವುದು ಅಲ್ಲ. ಸಾರ್ವಜನಿಕ ಸ್ಥಳವನ್ನು ಸ್ವಚ್ಛವಾಗಿಡುವುದೂ ದೇಶಪ್ರೇಮ. ತೆರಿಗೆ ಪಾವತಿಸುವುದೂ ದೇಶಪ್ರೇಮ. ನಿಯಮ ಪಾಲಿಸುವುದೂ ದೇಶಪ್ರೇಮ. ಮತದಾನದ ಹಕ್ಕನ್ನು ಜವಾಬ್ದಾರಿಯಿಂದ ಬಳಸುವುದೂ ದೇಶಪ್ರೇಮ. ಮರವನ್ನು ಉಳಿಸುವುದು, ನೀರನ್ನು ಸಂರಕ್ಷಿಸುವುದು, ಹೆಣ್ಣುಮಕ್ಕಳಿಗೆ ಗೌರವ ನೀಡುವುದು, ದುರ್ಬಲರ ಬೆಂಬಲಕ್ಕೆ ನಿಲ್ಲುವುದು ಇವೆಲ್ಲವೂ ದೇಶಪ್ರೇಮದ ರೂಪಗಳೇ.
ದೇಶವೆಂದರೆ ನಕ್ಷೆಯಲ್ಲಿ ಎಳೆದ ಗಡಿಯಲ್ಲ. ನಮ್ಮ ಸುತ್ತಲಿನ ಮನುಷ್ಯರು, ಅವರ ಬದುಕು, ಅವರ ಕನಸುಗಳು, ಅವರ ನೋವು, ಅವರ ಭರವಸೆ ಇವೆಲ್ಲ ಸೇರಿ ದೇಶವಾಗುತ್ತದೆ.
ಭಾರತದ ದೊಡ್ಡ ಶಕ್ತಿ ಅದರ ವೈವಿಧ್ಯತೆ. ಭಾಷೆಗಳು ಬೇರೆ, ಆಚರಣೆಗಳು ಬೇರೆ, ಉಡುಪುಗಳು ಬೇರೆ, ಆಹಾರ ಪದ್ಧತಿಗಳು ಬೇರೆ. ಆದರೂ ಎಲ್ಲವನ್ನೂ ಮೀರಿಸಿ ನಮ್ಮನ್ನು ಒಂದಾಗಿಸುವ ಒಂದು ಭಾವವಿದೆ. ಅದುವೇ ‘ನಾವು ಭಾರತೀಯರು’ ಎಂಬ ಭಾವ. ಈ ಭಾವನೆ ದುರ್ಬಲವಾದಾಗ ಸ್ವಾತಂತ್ರ್ಯದ ಅರ್ಥವೂ ದುರ್ಬಲವಾಗುತ್ತದೆ. ದ್ವೇಷ, ವಿಭಜನೆ, ಅಸಹಿಷ್ಣುತೆ, ಹಿಂಸೆ, ಭ್ರಷ್ಟಾಚಾರ, ಪರಿಸರ ನಾಶ ಇವೆಲ್ಲವೂ ದೇಶದ ಸ್ವಾತಂತ್ರ್ಯದ ಆತ್ಮಕ್ಕೆ ಸವಾಲುಗಳೇ.
ಹೀಗಾಗಿ ಈ ಬಾರಿ ಧ್ವಜ ಹಾರಿಸುವಾಗ ಒಂದು ಕ್ಷಣ ನಮ್ಮೊಳಗನ್ನೂ ಅವಲೋಕಿಸೋಣ. ನಾವು ಪಡೆದ ಸ್ವಾತಂತ್ರ್ಯವನ್ನು ಮುಂದಿನ ಪೀಳಿಗೆಗೆ ಇನ್ನಷ್ಟು ಸುಂದರವಾಗಿ ಹಸ್ತಾಂತರಿಸಲು ನಾವು ಏನು ಮಾಡುತ್ತಿದ್ದೇವೆ ಎಂದು ಪ್ರಶ್ನಿಸೋಣ.
ಮತ್ತೆ ಶಾಲೆಯ ಮೈದಾನದಲ್ಲಿ ಮೊಳಗುವ ದೇಶಭಕ್ತಿಗೀತೆಯೊಂದಿಗೆ ಮಕ್ಕಳ ಕಣ್ಣುಗಳಲ್ಲಿ ಹೆಮ್ಮೆ ಅರಳಲಿ. ಧ್ವಜದ ಬಣ್ಣಗಳಲ್ಲಿ ಕೇವಲ ಬಣ್ಣವಲ್ಲ, ಬಲಿದಾನದ ನೆನಪು ಕಾಣಿಸಲಿ. ರಾಷ್ಟ್ರಗೀತೆಯ ಪ್ರತಿಯೊಂದು ಪದವೂ ಹೃದಯವನ್ನು ಮುಟ್ಟಲಿ. ಸ್ವಾತಂತ್ರ್ಯೋತ್ಸವ ಕೇವಲ ಒಂದು ದಿನವಾಗದಿರಲಿ. ಆಗಸ್ಟ್ 15ರಂದು ಧ್ವಜ ಅರಳುವುದು ಒಂದು ಸಂಪ್ರದಾಯವಾದರೆ, ಪ್ರತಿದಿನ ನಮ್ಮೊಳಗೆ ದೇಶಪ್ರೇಮ ಅರಳುವುದು ನಮ್ಮ ಕರ್ತವ್ಯವಾಗಲಿ. ಆಗ ಮಾತ್ರ ಸ್ವಾತಂತ್ರ್ಯದ ಸಂಭ್ರಮ ಮತ್ತೆ ನಿಜವಾಗಿ ಅರಳುತ್ತದೆ.
✍️ ಡಾ. ಮೈತ್ರಿ ಭಟ್, ವಿಟ್ಲ








