ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರ ನಡುವೆ ಗಲಾಟೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ತೆರಳಿದ ಬಂಟ್ವಾಳ ನಗರ ಠಾಣೆಯ ಎಎಸೈ ಹಾಗೂ ಸಿಬ್ಬಂದಿಗಳಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಪೊಲೀಸ್ ವಾಹನವನ್ನು ಹಾನಿಗೊಳಿಸಿದ ಘಟನೆ ನಡೆದಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ, ಸಿಬ್ಬಂದಿಗಳಾದ ದೇವಪ್ಪ ಮಲ್ಲಿಕಸಾಬ್, ನಿರಂಜನ್ ಹಲ್ಲೆಗೊಳಗಾದವರು.
ಮೆಲ್ಕಾರ್ ನಲ್ಲಿ ಲಾರಿ ಚಾಲಕರು ಮತ್ತು ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಎಂಬುದಾಗಿ ಬಂದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಜೆ ತೆರಳಿದ್ದರು. ಸ್ಥಳದಲ್ಲಿ ಕೈಯಲ್ಲಿ ಮಾರಕಾಯುಧವಾದ ಕಬ್ಬಿಣದ ರಾಡನ್ನು ಹಿಡಿದುಕೊಂಡು ಗಲಾಟೆ ಮಾಡುತ್ತಿದ್ದ ಗೋಳ್ತಮಜಲು ಗ್ರಾಮದ ಬಲ್ಲೇಕೋಡಿ ನಿವಾಸಿ ಅಬ್ದುಲ್ ಸಲಾಂ (28) ಎಂಬಾತನ ಬಳಿ ತೆರಳಿ ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಆ ವ್ಯಕ್ತಿಯು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಕೈಯಲ್ಲಿದ್ದ ಮಾರಕಾಯುಧವಾದ ಕಬ್ಬಿಣದ ರಾಡಿನಲ್ಲಿ ಏಕಾಏಕಿಯಾಗಿ ಪೊಲೀಸರಿಗೆ ಹಲ್ಲೆ ನಡೆಸಿದ್ದಾನೆ. ಹಾಗೂ ಸ್ಥಳದಲ್ಲಿದ್ದ ಇಲಾಖಾ ವಾಹನವನ್ನು ರಾಡ್ ನಿಂದ ಹೊಡೆದು ಕಾಲಿನಿಂದ ತುಳಿದು ಕೈಯಿಂದ ಹೊಡೆದು ಜಖಂಗೊಳಿಸಿದ್ದಾನೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಹಲ್ಲೆ ನಡೆಯುವುದನ್ನು ತಡೆಯಲು ಬಂದು ಆರೋಪಿಗೆ ಸಾರ್ವಜನಿಕವಾಗಿ ಥಳಿಸಿದ್ದು ಈತನಿಗೂ ಗಾಯವಾಗಿದೆ. ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಮತ್ತು ಇತರ 3 ಪೊಲೀಸರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆರೋಪಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.