ನವದೆಹಲಿ: ಜೂನ್ 21ರಿಂದ ಕೇಂದ್ರ ಸರ್ಕಾರದಿಂದಲೇ ಎಲ್ಲಾ ರಾಜ್ಯಗಳಿಗೆ ಉಚಿತ ಕೊರೊನ ಲಸಿಕೆ ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಈ ಕುರಿತು ನಿನ್ನೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಜೂ. 21ರ ಬಳಿಕ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು. ಈ ಮೊದಲು ಲಸಿಕೆ ವಿತರಣೆ ಸಂಬಂಧ ರಾಜ್ಯಗಳಿಗೆ ಶೇ.50 ರಷ್ಟು ಜವಾಬ್ದಾರಿ ವಹಿಸಲಾಗಿತ್ತು. ಆದರೆ ಲಸಿಕೆ ವಿತರಣೆ ಕುರಿತು ಒಂದಷ್ಟು ಟೀಕೆಗಳು ವ್ಯಕ್ತವಾದ್ದರಿಂದ ಲಸಿಕೆ ವಿತರಣೆಯ ಪೂರ್ತಿ ಜವಾಬ್ದಾರಿಯನ್ನು ಕೇಂದ್ರ ಸರ್ಕಾರವೇ ಹೊರಲಿದ್ದು, ಮುಂದಿನ ಎರಡು ವಾರದಲ್ಲಿ ಆ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗುವುದು ಎಂದರು.


ಅಂತಾರಾಷ್ಟ್ರೀಯ ಯೋಗ ದಿನವಾದ ಜೂ. 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಲಾಗುವುದು. ಬೇರೆ ವಯೋಮಾನದವರಿಗೆ ಈಗಾಗಲೇ ಲಸಿಕೆ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಕಳೆದ ಬಾರಿ ಕೊರೊನಾ ಲಾಕ್ಡೌನ್ ಸಂಕಷ್ಟದ ಸಂದರ್ಭದಲ್ಲಿ 8 ತಿಂಗಳ ಕಾಲ ದೇಶದ ಜನರಿಗೆ ಉಚಿತವಾಗಿ ಆಹಾರಧಾನ್ಯ ವ್ಯವಸ್ಥೆ ಮಾಡಲಾಗಿದ್ದು, ಅದೇ ರೀತಿ ಈ ವರ್ಷವೂ ಮೇ ಮತ್ತು ಜೂನ್ ತಿಂಗಳಲ್ಲಿ ಉಚಿತವಾಗಿ ಆಹಾರಧಾನ್ಯ ನೀಡಲಾಗುತ್ತಿದೆ. ಜೊತೆಗೆ ಬಡವರು ಹಸಿವಿನಿಂದ ಮಲಗಬಾರದು ಹಾಗಾಗಿ ದೇಶದ 80 ಕೋಟಿ ಜನರಿಗೆ ನವೆಂಬರ್ ವರೆಗೂ ಅಂದರೆ ದೀಪಾವಳಿವರೆಗೆ ಉಚಿತವಾಗಿ ಆಹಾರ ಧಾನ್ಯ ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.










