ಮಲ್ಲಿಕಾ ಜೆ ರೈ ತುಳುನಾಡ್ ಪುತ್ತೂರು




ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ಹಾಗೂ ಸಾಲುಮರದ ತಿಮ್ಮಕ್ಕ, ಅವರ ನಿಧನ ಸುದ್ದಿ ಅತ್ಯಂತ ನೋವು ತರುವಂತಹದು . 114 ವರ್ಷದ ವಯಸ್ಸಿನಲ್ಲೂ ಪ್ರಕೃತಿಪ್ರೇಮ ಮತ್ತು ಸೇವಾ ಮನೋಭಾವದ ಶಕ್ತಿಯಾಗಿದ್ದ ತಿಮ್ಮಕ್ಕ ಅವರು, 385 ಆಲದ ಮರಗಳಿಂದ ಆರಂಭಿಸಿ ಸಾವಿರಾರು ಮರಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ ಪರಿಸರಕ್ಕೆ ಪುಷ್ಟಿ ನೀಡಿದ್ದಾರೆ. ಔಪಚಾರಿಕ ಶಿಕ್ಷಣವಿಲ್ಲದೇ ಕಷ್ಟದ ಜೀವನ ನಡೆಸಿದರೂ, ಪ್ರಕೃತಿಯೊಡನೆ ಬೆರೆತು ಬದುಕಿದ ಅವರ ಜೀವಿತವು ನಿಜವಾದ ಪರಿಸರ ಸಂರಕ್ಷಣೆಯ ಪಾಠ. 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ಅವರು ನಮ್ಮೆಲ್ಲರಿಗೂ ಪ್ರೇರಣೆಯ ಸ್ಪೂರ್ತಿ.
ಸಾಲುಮರದ ತಿಮ್ಮಕ್ಕರವರಿಗೆ ಭಾವಪೂರ್ಣ ಶ್ರದ್ಧಾಂಜಲಿ.
ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸೇವಾಸ್ಫೂರ್ತಿ ಸದಾ ನಮ್ಮೆಲ್ಲರನ್ನು ಪ್ರಕೃತಿ ಸಂರಕ್ಷಣೆಯತ್ತ ದಾರಿದೀಪದಂತೆ ಮಾರ್ಗದರ್ಶನ ಮಾಡಲಿ. ಸಾಲುಮರದ ತಿಮ್ಮಕ್ಕ ಬಾಹ್ಯವಾಗಿ ನಮ್ಮೊಂದಿಗಿಲ್ಲ. ಅಂತರಂಗದಲ್ಲಿ ಸದಾ ಸ್ಮರಣೀಯರು. ಪ್ರಕೃತಿಯೊಂದಿಗೆ ಬೆರೆತಾಗ ಉಲ್ಲಾಸವೇ ಮೈಮನದೊಳಗ. ಜೀವ ಚೈತನ್ಯ ದೀರ್ಘಾಯುಷ್ಯದ ರಹಸ್ಯ ಮನದ ಹಸಿರು ಭಾವದಿಂದ. ಹುಟ್ಟುವಾಗ ಹೆಸರಿಲ್ಲ ಬರಿಯ ಉಸಿರು. ಕಾಯ ಅಳಿದ ಮೇಲೆ ಉಸಿರಿಲ್ಲ, ಆದರೆ ಹೆಸರು ಚಿರಂಜೀವಿಯಾಗಿಸಿ ಬಾಳಿದ ಮಹಾಮಾತೆ ವೃಕ್ಷಮಾತೆ ತಿಮ್ಮಕ್ಕ. ಅವರಿಗಿದೋ ಸಾವಿರದ ಶರಣು.
✍🏻ಮಲ್ಲಿಕಾ ಜೆ ರೈ ತುಳುನಾಡ್ ಪುತ್ತೂರು ಅಂಕಣಕಾರರು








