ಮುಲ್ಕಿ,: ಮರದ ಗೆಲ್ಲು ಕಡಿಯುವ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ನೆರೆಮನೆಯ ದಂಪತಿಯನ್ನು ಚೂರಿಯಿಂದ ತಿವಿದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಘಟನೆ ನಡೆದಿದ್ದು ದಿನಾಂಕ 29-04-2020ರಂದು ಮುಲ್ಕಿ ತಾಲೂಕು ಏಳಿಂಜೆ ಗ್ರಾಮದ ಮುತ್ತಯ್ಯಕೆರೆ ಆಗಿಂದಕಾಡು ಎಂಬಲ್ಲಿ ಆರೋಪಿ ಆಲ್ಫೋನ್ಸ್ ಸಲ್ದಾಣನು ತನ್ನ ನೆರೆಮನೆಯ ವಿನ್ಸಿ ಯಾನೆ ವಿನ್ಸೆಂಟ್ ಡಿ. ಸೋಜಾರನ್ನು ರಾಜಿ ಪಂಚಾಯತಿಕೆ ಮಾಡುವ ನೆಪದಲ್ಲಿ ತನ್ನ ಮನೆಗೆ ಕರೆಸಿ, ಗಲಾಟೆ ನಡೆದು ಚೂರಿಯಿಂದ ತಿವಿದು ಕೊಲೆ ಮಾಡಿದ್ದ. ಈ ವೇಳೆ ಪತಿಯನ್ನು ರಕ್ಷಿಸಲು ಧಾವಿಸಿದ ವಿನ್ಸಿ ಅವರ ಪತ್ನಿ ಶ್ರೀಮತಿ ಹೆಲೆನ್ ಡಿ. ಸೋಜಾ ಯಾನೆ ಹೆಲೆನ್ ರೋಸಿ ರೋಡ್ರಿಗಸ್ ಅವರನ್ನೂ ಅಟ್ಟಾಡಿಸಿ ಅಮಾನುಷವಾಗಿ ಚೂರಿಯಿಂದ ತಿವಿದು ಹತ್ಯೆಗೈದಿದ್ದ.
ಈ ಸಂಬಂಧ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 31/2020ರಂತೆ ಕಲಂ 341, 504, 506, 302 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಮುಲ್ಕಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಜಯರಾಮ ಡಿ. ಗೌಡ ಅವರು ಸಂಪೂರ್ಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ತನಿಖೆಗೆ ಎಎಸ್ಐ ಉಮೇಶ್ ಕೆ ಹಾಗೂ ಹೆಚ್‌ಸಿ 725 ವಾದಿರಾಜ ಸಹಕರಿಸಿದ್ದರು.
ಪ್ರಕರಣವು ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಎಸ್.ಸಿ. ನಂ. 69/2020ರಂತೆ ವಿಚಾರಣೆಗೆ ಒಳಪಟ್ಟಿತ್ತು. ಬಳಿಕ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ದಿನಾಂಕ 19-01-2026ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹2 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗಾ ಮಾರ್ಗರೇಟ್ ಅವರು ಅಭಿಯೋಜನೆ ಪರ ವಾದ ಮಂಡಿಸಿದ್ದರು. ಸಾಕ್ಷಿ ವಿಚಾರಣೆ ಸಂದರ್ಭದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ಎಂಪಿಸಿ 827 ಕಾವ್ಯಾ ಸಹಕರಿಸಿದ್ದರು.








