Tuesday, July 28, 2026
spot_imgspot_img
spot_imgspot_img

ಜಾರ್ಖಂಡ್: ಜಾನುವಾರು ಸಾಗಣೆ ವೇಳೆ ಗುಂಪು ಹಲ್ಲೆ – ಮುಸ್ಲಿಂ ವ್ಯಾಪಾರಿ ಸಾವು, ಧರ್ಮಾಧಾರಿತ ಹತ್ಯೆ ಆರೋಪ

- Advertisement -
- Advertisement -

ಗೊಡ್ಡ (ಜಾರ್ಖಂಡ್): ಜಾರ್ಖಂಡ್‌ನ ಗೊಡ್ಡ ಜಿಲ್ಲೆಯಲ್ಲಿ ಜಾನುವಾರು ಸಾಗಣೆ ಮಾಡುತ್ತಿದ್ದ ಮುಸ್ಲಿಂ ವ್ಯಾಪಾರಿಯೊಬ್ಬರನ್ನು ಗುಂಪೊಂದು ಮಾರಣಾಂತಿಕವಾಗಿ ಥಳಿಸಿ ಹತ್ಯೆಗೈದಿರುವ ಘಟನೆ ಬಿಹಾರ–ಜಾರ್ಖಂಡ್ ಗಡಿಭಾಗದಲ್ಲಿ ನಡೆದಿದೆ. ಈ ಘಟನೆ ಧರ್ಮದ ಆಧಾರದಲ್ಲಿ ನಡೆದಿದೆ ಎಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ.


ರಾಣಿಪುರ ಗ್ರಾಮದ ನಿವಾಸಿ, 45 ವರ್ಷದ ಪಪ್ಪು ಅನ್ಸಾರಿ ಅವರು ಬಿಹಾರದ ಬಂಕಾ ಜಾನುವಾರು ಮಾರುಕಟ್ಟೆಯಿಂದ ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ, ಬುಧವಾರ ರಾತ್ರಿ ಸುಗಬಥನ್ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪು ಅವರ ವಾಹನವನ್ನು ತಡೆದು ಈ ಕೃತ್ಯ ಎಸಗಿದೆ ಎಂದು ತಿಳಿದುಬಂದಿದೆ.


ವಾಹನವನ್ನು ತಡೆದು ವಿಚಾರಣೆ ನಡೆಸುವ ನೆಪದಲ್ಲಿ ದುಷ್ಕರ್ಮಿಗಳು ಪಪ್ಪು ಅನ್ಸಾರಿ ಅವರ ಹೆಸರನ್ನು ಕೇಳಿದ್ದಾರೆ. ಅವರು ಮುಸ್ಲಿಂ ಎಂಬುದು ತಿಳಿದ ಬಳಿಕ ಕೊಡಲಿ, ಕುಡಗೋಲು ಹಾಗೂ ಇತರೆ ಹರಿತ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ತೀವ್ರವಾಗಿ ಗಾಯಗೊಂಡ ಪಪ್ಪು ಅನ್ಸಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ನಂತರ ಅವರ ಮೃತದೇಹವನ್ನು ಸಮೀಪದ ಹೊಲವೊಂದರಲ್ಲಿ ಎಸೆದು ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.


ವಾಹನದಲ್ಲಿದ್ದ ಇತರರು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪಪ್ಪು ಅನ್ಸಾರಿ ಮಾತ್ರ ದುಷ್ಕರ್ಮಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಅವರು ಕಾನೂನುಬದ್ದವಾಗಿ ಜಾನುವಾರು ಸಾಗಾಟ ನಡೆಸುತ್ತಿದ್ದರು ಎಂದು ಕುಟುಂಬದವರು ಸ್ಪಷ್ಟಪಡಿಸಿದ್ದಾರೆ.
ಮೃತರ ಪತ್ನಿ ಆಯೇಶಾ ಬೇಗಂ ನೀಡಿದ ದೂರಿನ ಮೇರೆಗೆ ಗುರುವಾರ ಎಫ್‌ಐಆರ್ ದಾಖಲಾಗಿದ್ದು, ಅಪರಿಚಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೊಡ್ಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಕೇಶ್ ಕುಮಾರ್ ತಿಳಿಸಿದ್ದಾರೆ.

- Advertisement -

Related news

error: Content is protected !!