




ಕಠ್ಮಂಡು: ನೇಪಾಳದ ಕಠ್ಮಂಡುವಿನಲ್ಲಿರುವ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು(ಮೇ 11) ಮುಂಜಾನೆ ಭಾರೀ ಅನಾಹುತವೊಂದು ತಪ್ಪಿದೆ.
ಇಸ್ತಾನ್ಬುಲ್‌ನಿಂದ ಆಗಮಿಸುತ್ತಿದ್ದ ಟರ್ಕಿಶ್ ಏರ್‌ಲೈನ್ಸ್ ವಿಮಾನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ರನ್‌ವೇ ಮೇಲೆ ಇಳಿಯುತ್ತಿದ್ದಂತೆ ಅದರ ಹಿಂಬದಿಯ ಚಕ್ರಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಪ್ರಯಾಣಿಕರು ಕೆಲಕಾಲ ಗಾಬರಿಗೊಳಗಾಗಿದ್ದರು.
ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿದ್ದು, ಅಗ್ನಿಶಾಮಕ ದಳದ ವಾಹನಗಳನ್ನು ಸ್ಥಳಕ್ಕೆ ರವಾನಿಸಿದರು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಅಗ್ನಿಶಾಮಕದಳ ಯಶಸ್ವಿಯಾಯಿತು.
ವಿಮಾನದಲ್ಲಿ ಒಟ್ಟು 278 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಸೇರಿದಂತೆ ಒಟ್ಟು 289 ಜನರಿದ್ದರು. ವಿಶ್ವಸಂಸ್ಥೆಯ ಕೆಲವು ಪ್ರಮುಖ ಅಧಿಕಾರಿಗಳೂ ವಿಮಾನದಲ್ಲಿದ್ದರೆಂದು ತಿಳಿದುಬಂದಿದೆ.
ಬೆಂಕಿ ಕಾಣಿಸಿಕೊಂಡ ತಕ್ಷಣ ವಿಮಾನದ ತುರ್ತು ನಿರ್ಗಮನ ದ್ವಾರಗಳ ಮೂಲಕ ಎಲ್ಲಾ ಪ್ರಯಾಣಿಕರನ್ನು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರ ಕರೆತರಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ ಎಂದು ವರದಿ ಮೂಲಕ ತಿಳಿದುಬಂದಿದೆ.








