ತ
ಬಿ.ಸಿ ರೋಡ್: ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಮತ್ತು ಘಾಟಿ ಪ್ರದೇಶದಲ್ಲಿ ನದಿ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಹರಿಯುವ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿದು ಜನರಲ್ಲಿ ಭಯದ ವಾತಾವಣರ ಸೃಷ್ಟಿ ಮಾಡಿದೆ. ಇತ್ತೀಚಿನ ದಿನಗಳ ಹಿಂದೆ 6ರಿಂದ 7 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದ ನದಿ ನೀರಿನ ಮಟ್ಟ ನಿನ್ನೆ ರಾತ್ರಿಯ ಬಳಿಕ ಏರಿಕೆ ಕಂಡು ಇಂದು ಬೆಳಗ್ಗೆ ವೇಳೆಗೆ 9 ಮೀಟರ್ ಎತ್ತರದಲ್ಲಿ ಹರಿಯಿತು. ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಈ ಹಿನ್ನೆಲೆಯಲ್ಲಿ ನದಿ ಸನಿಹದ ತಗ್ಗು ಪ್ರದೇಶಗಳಿಗೆಲ್ಲ ಆವರಿಸಿಕೊಂಡಿತು. ಪ್ರತಿ ವರ್ಷವೂ ಮುಳುಗಡೆಯಾಗುವ ಆಲಡ್ಕ, ಬಡ್ಡಕಟ್ಟೆ, ಗೂಡಿನಬಳಿ ಬಂಟ್ವಾಳ ರಸ್ತೆ ಸಹಿತ ತೀರ ಪ್ರದೇಶಗಳು ಜಲಾವೃತಗೊಂಡವು. ಮಧ್ಯಾಹ್ನದ ವೇಳೆ ನದಿ ಇಳಿಮುಖವಾಗಿ ಹರಿಯಲಾರಂಭಿಸಿದ್ದು, ಸಂಜೆ ವೇಳೆ ಕಡಿಮೆಯಾಯಿತು. ಪಾಣೆಮಂಗಳೂರು, ಆಲಡ್ಕ, ನಂದಾವರ, ಬೋಗೋಡಿ, ಗೂಡಿನಬಳಿ, ಬಸ್ತಿಪಡ್ಪು, ಬಂಟ್ವಾಳ ಕೆಳಗಿನಪೇಟೆ, ತಲಪಾಡಿ, ಪೊನ್ನೋಡಿ, ತುಂಬೆ, ವಳವೂರು, ಪುದು, ನಾವೂರು, ಅಜಿಲಮೊಗರು ಪ್ರದೇಶಗಳಿಗೆ ನೀರು ನುಗ್ಗಿದೆ.
ಹಲವೆಡೆ ಹಾನಿ: ಗಾಳಿ ಮಳೆಯಿಂದ ತಾಲೂಕಿನ ಹಲವೆಡೆ ವ್ಯಾಪಕ ಹಾನಿಗಳುಂಟಾಗಿವೆ. ಕುಕ್ಕಿಪ್ಪಾಡಿ ಗ್ರಾಮದ ಸಿದ್ಧಕಟ್ಟೆ ಚರ್ಚ್ ಅಂಗನವಾಡಿ ಕೇಂದ್ರದ ಆವರಣಗೋಡೆ ಕುಸಿದುಬಿದ್ದಿದೆ. ಮಳೆನೀರು ಅಂಗನವಾಡಿ ಕಟ್ಟಡದ ಒಳಗೆ ನುಗ್ಗಿ ಹಾನಿ ಸಂಭವಿಸಿದೆ. ಜೊತೆಗೆ ಹಂಚಿನ ಛಾವಣಿಗೂ ಹಾನಿ ಸಂಭವಿಸಿದೆ.
ಮಳೆಯಿಂದಾಗಿ ಬಿ.ಸಿ.ರೋಡು- ಧರ್ಮಸ್ಥಳ ರಸ್ತೆಯ ಮಣಿಹಳ್ಳ ಸಮೀಪದ ಹಂಚಿಕಟ್ಟೆಯಲ್ಲಿ ಮರವೊಂದು ಹೆದ್ದಾರಿಗೆ ಅಡ್ಡವಾಗಿ ಬಿದ್ದ ಪರಿಣಾಮ ಕೆಲಹೊತ್ತುಗಳ ಕಾಲ ಸಂಚಾರ ಬಂದ್ ಆಗಿತ್ತು. ಬಳಿಕ ಸ್ಥಳೀಯರು ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪಾಣೆಮಂಗಳೂರಿನ ಆಲಡ್ಕ ಸಮೀಪ ಮನೆಗಳಿಗೆ ನೀರು ನುಗ್ಗಿದೆ. ಇತಿಹಾಸ ಪ್ರಸಿದ್ಧ ಅಜಿಲಮೊಗರು ಜುಮ್ಮಾ ಮಸೀದಿ ಸಭಾಂಗಣದಲ್ಲಿ ನೀರು ತುಂಬಿತ್ತು. ಉಪ್ಪಿನಂಗಡಿ- ಬಂಟ್ವಾಳ ರಸ್ತೆ ಸಂಪೂರ್ಣ ಮುಳುಗಡೆಗೊಂಡಿತು. ನಂದಾವರ ಸಂಪರ್ಕ ಸೇತುವೆಯೂ ಮುಳುಗಡೆಯಾಗಿದೆ.
ಡ್ಯಾಂಗಳು ಭರ್ತಿ:
ಶಂಭೂರು ಡ್ಯಾಂ ಭರ್ತಿಯಾಗಿದ್ದು, 14 ಗೇಟುಗಳನ್ನು ಶೇ.50ರಷ್ಟು ತೆರೆಯಲಾಗಿದೆ. ಆಗಾಗ ಸೈರನ್ ಮೊಳಗಿಸುವ ಮೂಲಕ ನೀರನ್ನು ಹರಿಯಬಿಡಲಾಯಿತು. ತುಂಬೆ ಅಣೆಕಟ್ಟಿನಲ್ಲಿ 7.8 ಮೀಟರ್ ಎತ್ತರಕ್ಕೆ ನೀರು ಹರಿದಿದೆ. ನಿನ್ನೆ ತುಂಬೆ ಡ್ಯಾಂನಲ್ಲಿ 6.4 ಮೀ ಎತ್ತರದಲ್ಲಿ ಸಂಗ್ರಹವಿತ್ತು. ಇಲ್ಲಿ ಎಲ್ಲ 30 ಗೇಟುಗಳನ್ನು ತೆರೆಯಲಾಗಿದೆ.
ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದ ನೆಲ್ಲಿಗುಡ್ಡೆ ಆಗರ್ಥ್ಯರ್ ಎಂಬಲ್ಲಿ ಶ್ರೀನಿವಾಸ್ ನಾಯಕ್ ಅವರ ಕೃಷಿ ಭೂಮಿಗೆ ನೀರು ನುಗಿದ್ದು ಅಪಾರ ನಷ್ಟವಾಗಿದೆ .ಹೊಳೆಯ ನೀರು ತೋಟಕ್ಕೆ ನುಗ್ಗಿದ ಕಾರಣ ಅಡಿಕೆ,ತೆಂಗಿನ ಮರ ಹಾಗೂ ಕಾಳು ಮೆಣಸು ಗಿಡಗಳಿಗೆ ಹಾನಿಯಾಗಿದೆ .2 ಎಕರೆ ಕೃಷಿ ಭೂಮಿಗೆ ಹಾನಿಯಾಗಿದೆ .ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಸದಸ್ಯ ಪದ್ಮ ಶೇಖರ್ ಜೈನ್, ಸಹಾಯಕ ತೋಟಗಾರಿಕಾ ಅಧಿಕಾರಿ ಪ್ರದೀಪ್ ಡಿ ಸೋಜಾ,ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು .
ಕಳೆದ ವರ್ಷವೂ ನೇತ್ರಾವತಿ ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಹಲವು ಪ್ರದೇಶಗಳು ಮುಳುಗಡೆಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಇದೀಗ ತಾಲೂಕು ಆಡಳಿತ ನೇತೃತ್ವದಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ.