ಬೆಂಗಳೂರಿನಿಂದ ಕೇರಳಕ್ಕೆ ತೆರಳಿದ ಯುವಕನ ನಿಫಾ ವೈರಸ್‌ಗೆ ಬಲಿಯಾಗಿದ್ದಾನೆ. ನಿಫಾ ವೈರಸ್‌ನಿಂದ 2 ಸಾವು ಖಚಿತವಾಗುತ್ತಿದ್ದಂತೆ ಕೇರಳ ಸರ್ಕಾರ ಅಲರ್ಟ್ ಆಗಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ವಾಂಡೂರ್‌ನವನಾದ 23 ವರ್ಷದ ವಿದ್ಯಾರ್ಥಿ ಜಾಂಡೀಸ್ ರೀತಿಯ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ತವರಿಗೆ ಮರಳಿದ್ದ. ಒಂದು ವಾರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಸೆ.9ರಂದು ಆತ ಕೊನೆಯುಸಿರೆಳೆದಿದ್ದ. ಕೊಝಿಕ್ಕೋಡ್‌ನಲ್ಲಿ ಈತನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ನಿಪಾ ವೈರಾಣು ಸೋಂಕಿನ ಲಕ್ಷಣ ಕಂಡುಬಂದಿತ್ತು. ಹೀಗಾಗಿ ಉನ್ನತ ಪರಿಶೀಲನೆಗಾಗಿ ಆ ಮಾದರಿಯನ್ನು ಪುಣೆಯ ವೈರಾಣು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈ ವೇಳೆ ನಿಫಾ ವೈರಸ್ ದೃಢಪಟ್ಟಿತ್ತು. ಇದು ನಿಫಾ ವೈರಸ್‌ಗೆ ಈ ವರ್ಷ ಬಲಿಯಾದ 2ನೇ ಪ್ರಕರಣವಾಗಿದೆ.
ಮಲಪ್ಪುರಂ ಜಿಲೆಯಲ್ಲಿ ಮಾಸ್ಕ್ ಕೂಡಾ ಕಡ್ಡಾಯಗೊಳಿಸಲಾಗಿದೆ. ಈ ಜಿಲ್ಲೆಯ ಹಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ.
ಬೆಳಗ್ಗೆ 10 ಗಂಟೆಯಿಂದ 7 ಗಂಟೆ ವರೆಗೆ ಸಾರ್ವಜನಿಕರಿಗೆ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಬಳಿಕ ಸಾರ್ವಜನಿಕ ಪ್ರದೇಶಗಳಲ್ಲಿ ಭೇಟಿ ಸೇರಿದಂತೆ ಜನದಟ್ಟಣೆ ನಿಷೇಧಿಸಿದೆ. ಕೆಲ ಅಗತ್ಯ ವಸ್ತುಗಳಾದ ಹಾಲು ಸೇರಿದಂತೆ ಇತರ ವಸ್ತುಗಳ ಸೇವೆ ಬೆಳಗ್ಗೆ 6 ಗಂಟೆಯಿಂದ ಆರಂಭಿಸಲು ಅವಕಾಶವಿದೆ.
ಜಿಲ್ಲೆಯ ಸಿನಿಮಾ ಥಿಯೇಟರ್‌ಗಳನ್ನು ಮುಚ್ಚಲು ಸೂಚಿಸಲಾಗಿದೆ. ನಿಫಾ ವೈರಸ್ ಪತ್ತೆಯಾದ ಸುತ್ತ ಮುತ್ತಲಿನ ತಾಲೂಕು ಹಾಗೂ ಗ್ರಾಮಗಳಲ್ಲಿ ಶಾಲಾ ಕಾಲೇಜು, ಇತರ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ. ಇಡೀ ಜಿಲ್ಲೆಯಲ್ಲಿ ಶಾಲಾ ಕಾಲೇಜಿನಲ್ಲಿ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಇನ್ನು ಸಾರ್ವಜನಿಕ ಪ್ರದೇಶದಲ್ಲೂ ಮಾಸ್ಕ ಕಡ್ಡಾಯ ಮಾಡಲಾಗಿದೆ. ಪ್ರಾಣಿ ಪಕ್ಷಿಗಳು ಕಚ್ಚಿರುವ ಯಾವುದೇ ಆಹಾರ ಸೇವಿಸದಂತೆ ಸೂಚಿಸಲಾಗಿದೆ.