

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ 600ಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರು ಪತ್ತೆಯಾಗಿದ್ದು, ಅದರಲ್ಲಿ 150 ಜನರ ತಂಡವನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಬಾಗ್ದೋಗ್ರಾಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಗಡಿ ಭದ್ರತಾ ಪಡೆ ಸಿಬ್ಬಂದಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಂಗ್ಲಾ ವಲಸಿಗರ ಪತ್ತೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಯೋಗದೊಂದಿಗೆ ಕಾಶ್ಮೀರ ಕಣಿವೆಯಾದ್ಯಂತ ಅಧಿಕಾರಿಗಳು ಸಮೀಕ್ಷೆ ನಡೆಸಿ, ಸಮೀಕ್ಷೆಯಲ್ಲಿ ಸುಮಾರು 600 ಬಾಂಗ್ಲಾದೇಶಿ ಪ್ರಜೆಗಳು ಈ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿರುವುದು ಕಂಡುಬಂದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದರಲ್ಲಿ 150 ಮಂದಿಯನ್ನು ಶ್ರೀನಗರ ಪೊಲೀಸರ ಉಸ್ತುವಾರಿಯಲ್ಲಿರುವ ಶಿಬಿರವೊಂದರಲ್ಲಿ ಇರಿಸಲಾಗಿತ್ತು. ಅಲ್ಲಿಂದ ಅವರನ್ನು ತಮ್ಮ ತಾಯ್ನಾಡಿಗೆ ಕಳುಹಿಸುವ ಪ್ರಕ್ರಿಯೆಗಾಗಿ ಬಾಗ್ದೋಗ್ರಾಕ್ಕೆ ಕರೆದೊಯ್ಯಲಾಗಿದೆ. ಅ.7 ರಂದು 150 ಮಂದಿ ಬಾಂಗ್ಲಾದೇಶಿಗಳನ್ನು ಗಡೀಪಾರು ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ವಲಸೆ ಮತ್ತು ಇತರ ಅಂಶಗಳಿಂದ ಉಂಟಾಗುವ ಜನಸಂಖ್ಯೆಯಲ್ಲಿನ ಹೆಚ್ಚಳವನ್ನು ಅಧ್ಯಯನ ಮಾಡಲು ಹಾಗೂ ಅವುಗಳನ್ನು ನಿಭಾಯಿಸಲು ಕ್ರಮಗಳನ್ನು ಶಿಫಾರಸು ಮಾಡಲು ಗೃಹ ಸಚಿವಾಲಯ ಮೇ 26 ರಂದು HLCDC ಸಮೀತಿಯನ್ನು ರಚಿಸಿತ್ತು. ಈ ಸಮಿತಿಗೆ ಒಂದು ವರ್ಷದೊಳಗೆ ತನ್ನ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಕುರಿತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ HLCDC ವಿವರಗಳನ್ನು ಕೋರಿತ್ತು. ಈ ಮಾಹಿತಿಯ ಆಧಾರದ ಮೇಲೆ ಸಮೀಕ್ಷೆ ನಡೆಯುತ್ತಿದೆ ಎನ್ನಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವ್ಲೇಕರ್ ಅವರ ನೇತೃತ್ವದ ಈ ಸಮಿತಿಯು, ಅಕ್ರಮ ವಲಸೆ ಮತ್ತು ಇತರ ಅಸಹಜ ಕಾರಣಗಳಿಂದ ದೇಶದ ವಿವಿಧ ಭಾಗಗಳಲ್ಲಿ ಉಂಟಾಗುತ್ತಿರುವ ಜನಸಂಖ್ಯಾ ಬದಲಾವಣೆಗಳನ್ನು ವೈಜ್ಞಾನಿಕವಾಗಿ ಮೌಲ್ಯಮಾಪನ ಮಾಡಲಿದೆ. ಅವುಗಳ ಕಾರಣಗಳನ್ನು ವಿಶ್ಲೇಷಿಸಲಿದೆ ಹಾಗೂ ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








